ನೇಜಾರಿನಲ್ಲಿ ಮೂವರ ಬರ್ಬರ ಹತ್ಯೆ ಪ್ರಕರಣ: ‘ಸ್ನ್ಯಾಪ್ ಚಾಟ್’ ಲೊಕೇಶನ್ ಮೂಲಕ ಐನಾಝ್ ಮನೆಗೆ ಬಂದಿದ್ದ ನರಹಂತಕ ಪ್ರವೀಣ್
ಉಡುಪಿ: ನೇಜಾರಿನಲ್ಲಿ ತಾಯಿ ಹಾಗೂ ಮೂರು ಮಕ್ಕಳ ಬರ್ಬರ ಹತ್ಯೆಗೈದ ಹಂತಕ ಪ್ರವೀಣ್ ನೇಜಾರಿನ ಮನೆಯ ದಾರಿಯನ್ನು ‘ಸ್ನ್ಯಾಪ್ ಚಾಟ್’ ಮೂಲಕ ಕಂಡುಕೊಂಡಿದ್ದ ಎಂಬುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.
ಹಂತಕ ಪ್ರವೀಣ್ ತಾನು ಮಾಡಿದ ಕೊಲೆಯ ಯಾವುದೇ ಸುಳಿವು ಸಿಗದಂತೆ ಕೇವಲ ಎರಡು ದಿನದಲ್ಲಿ ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ದ. ಪ್ರವೀಣ್ ಚೌಗುಲೆ ಐನಾಝಳ ಮನೆಯ ದಾರಿಯನ್ನು ‘ಸ್ನ್ಯಾಪ್ ಚಾಟ್’ನಲ್ಲಿ ಲೋಕೇಶನ್ ಹಾಕುವ ಮೂಲಕ ನೇಜಾರಿನ ಮನೆ ತಲುಪಿದ್ದ ಎಂದು ತಿಳಿದು ಬಂದಿದೆ.
ನ.12 ರಂದೇ ಐನಾಝ್ ನೇಜಾರಿನ ಮನೆಗೆ ಬಂದಿದ್ದ ಎನ್ನುವುದು ಪೊಲೀಸ್ ತನಿಖೆಯಿಂದ ಹೊರಬಿದ್ದಿದೆ. ಕೃತ್ಯಕ್ಕೆ ಒಂದು ವಾರ ಮೊದಲು ಐನಾಝ್ ಮನೆಯಲ್ಲಿ ನಡೆದ ಹುಟ್ಟುಹಬ್ಬ ಆಚರಣೆಯಲ್ಲಿ ಆತ ಆಕೆಗೆ ಉಂಗುರ ತೊಡಿಸಿದ್ದ ಎಂಬುದೆಲ್ಲ ಸುಳ್ಳು ಸುದ್ದಿ ಎಂಬುದು ಸ್ಪಷ್ಟವಾಗಿದೆ. ಪ್ರವೀಣ್ ಇದೇ ಮೊದಲ ಬಾರಿಗೆ ನೇಜಾರಿಗೆ ಬಂದು ಈ ಕೃತ್ಯ ಎಸಗಿದ್ದನು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೊಲೆಗೆ ಮುನ್ನಾ ದಿನ ಶನಿವಾರ ಸಂಜೆ ನೇಜಾರಿನ ಮನೆಗೆ ಬಂದಿದ್ದಳು. ಆಕೆಗೆ ಮರುದಿನ ರವಿವಾರ ರಾತ್ರಿ 8ಗಂಟೆಗೆ ದುಬೈ ಹೋಗಲು ಇದ್ದುದರಿಂದ ಮನೆಯಿಂದ ಬೆಳಗ್ಗೆ 11ಗಂಟೆಗೆ ಮಂಗಳೂರಿಗೆ ಹೊರಡಬೇಕಿತ್ತು. ಇದೆನ್ನೆಲ್ಲ ಅರಿತಿದ್ದ ಪ್ರವೀಣ್ ರವಿವಾರ ಬೆಳಗ್ಗೆ ಆಕೆ ಹೊರಡುವ ಮೊದಲು ಆಕೆಯನ್ನು ಹತ್ಯೆ ಮಾಡಲು ಯೋಜನೆ ರೂಪಿಸಿದ್ದನು ಎಂದು ತಿಳಿದುಬಂದಿದೆ.
ಮಂಗಳೂರಿನ ಬಿಜೈನಲ್ಲಿರುವ ಮೃತ ಯುವತಿ ಐಯ್ನಾಝ್ ಬಾಡಿಗೆ ರೂಂ ಬಳಿ ಪಾರ್ಕ್ ಮಾಡಿದ್ದ ಚೌಗಲೆ ಹೆಸರಿನಲ್ಲಿರುವ ಸ್ಕೂಟರ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನು ಪ್ರವೀಣ್ ಐನಾಝ್ಗೆ ಮಾರಾಟ ಮಾಡಿದ್ದಾನೆಯೇ ಅಥವಾ ಅವನ ಹೆಸರಿನಲ್ಲಿಯೇ ಇದೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.