ಕೇರಳ ಮೂಲದ ನರ್ಸ್‌ಗೆ ಮರಣದಂಡನೆ ಶಿಕ್ಷೆ ವಿಧಿಸಿದ ಯೆಮೆನ್ ಸುಪ್ರೀಂಕೋರ್ಟ್

ಯೆಮೆನ್: ಯೆಮೆನ್ ಪ್ರಜೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾಗೆ ವಿಧಿಸಿದ್ದ ಮರಣದಂಡನೆ ಶಿಕ್ಷೆ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಯನ್ನು ಯೆಮೆನ್ ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ಯೆಮೆನ್ ಪ್ರಜೆ ತಲಾಲ್ ಅಬ್ದೊ ಮಹ್ದಿಗೆ ಮತ್ತು ಬರಿಸುವ ಇಂಜೆಕ್ಷನ್ ನೀಡಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಮಿಷಾ 2017ರಿಂದ ಜೈಲುಶಿಕ್ಷೆ ಅನುಭವಿಸುತ್ತಿದ್ದಳು ಎಂದು ವರದಿ ತಿಳಿಸಿದೆ.
ಏತನ್ಮಧ್ಯೆ ಅರಬ್ ದೇಶದಲ್ಲಿ ಯುದ್ಧ ನಡೆಯುತ್ತಿದ್ದ ಪರಿಣಾಮ ಭಾರತೀಯ ಪ್ರಜೆಗಳಿಗೆ ಯೆಮೆನ್ ಗೆ ಭೇಟಿ ನೀಡದಂತೆ ನಿಷೇಧ ಹೇರಿದ್ದರಿಂದ ಪ್ರಿಯಾ ತಾಯಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದು, ತನಗೆ ಯೆಮೆನ್ ಗೆ ತೆರಳಲು ಅವಕಾಶ ನೀಡುವಂತೆ ಮನವಿ ಮಾಡಿಕೊಂಡಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಗುರುವಾರ, ಪ್ರಿಯಾ ತಾಯಿ ಯೆಮೆನ್ ಗೆ ತೆರಳುವ ಬಗ್ಗೆ ಶೀಘ್ರವೇ ನಿರ್ಧಾರ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.