December 18, 2025

ಉಡುಪಿ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ: ಬಂಧಿತ ಆರೋಪಿಯಿಂದ ಹಲವು ವಿಚಾರ ಬೆಳಕಿಗೆ

0
image_editor_output_image964073573-1700026248680

ಉಡುಪಿ:  ಉಡುಪಿಯ ನೇಜಾರಿನಲ್ಲಿ ಗಗನಸಖಿ ಸೇರಿದಂತೆ ಒಂದೇ ಕುಟುಂಬದ ನಾಲ್ವರ‌ನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರವೀಣ್ ಚೌಗಲೆ (35) ಎಂಬಾತನನ್ನು ಬಂಧಿಸಿದ್ದು, ಆತನ ಬಂಧನದ ಬಳಿಕ ಕೆಲವು ಸಂಗತಿಗಳು ಬೆಳಕಿಗೆ ಬಂದಿವೆ.

ಮೂಲಗಳ ಪ್ರಕಾರ, ಪ್ರವೀಣ್ ಚೌಗಲೆ ಮತ್ತು ಹತ್ಯೆಯಾದ ಗಗನಸಖಿ ಅಯ್ನಾಜ್‌ ಅವರು ಸಹೋದ್ಯೋಗಿಗಳಾಗಿದ್ದರು ಎಂದು ತಿಳಿದು ಬಂದಿದೆ.

ಇನ್ನು ಅಯ್ನಾಜ್‌ ಮತ್ತು ಆರೋಪಿ ಪ್ರವೀಣ್ ನಡುವಿನ ದ್ವೇಷಕ್ಕೆ ಒಂದೇ ಕುಟುಂಬದ ನಾಲ್ವರ ಹತ್ಯೆ ನಡೆದಿದೆ ಎನ್ನಲಾಗುತ್ತಿದ್ದು ಈ ಬಗ್ಗೆ ಪೊಲೀಸರು ಎಲ್ಲಾ ರೀತಿಯ ತನಿಖೆಯನ್ನು ನಡೆಸುತ್ತಿದ್ದಾರೆ.

ಉಡುಪಿ ಜಿಲ್ಲೆಯ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ನೇಜಾರಿನಲ್ಲಿ ನವೆಂಬರ್ 12ರಂದು ತಾಯಿ ಹಸೀನಾ(46), ಪುತ್ರಿಯರಾದ ಅಫ್ನಾನ್ (23), ಅಯ್ನಾಜ್‌ (21) ಮತ್ತು ಪುತ್ರ ಆಸೀಮ್ (12) ನನ್ನು ಹತ್ಯೆ ಮಾಡಲಾಗಿದ್ದು, ಘಟನೆಯಲ್ಲಿ ಅಯ್ನಾಜ್‌ ಅವರ ಅಜ್ಜಿ ಹಾಜಿರಾಬಿ ಅವರು ಗಾಯಗೊಂಡಿದ್ದು ಈಗ ಚೇತರಿಸಿಕೊಂಡಿದ್ದಾರೆ.

ಎರಡು ದಿನಗಳ ಶೋಧದ ನಂತರ ಆರೋಪಿ ಪ್ರವೀಣ್ ನನ್ನು ಉಡುಪಿ ಮತ್ತು ಬೆಳಗಾವಿ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿಯಲ್ಲಿ ಬಂಧಿಸಿದ್ದಾರೆ.

ಇನ್ನು ಪ್ರವೀಣ್ ಈ ಹಿಂದೆ ಪೊಲೀಸ್ ಆಗಿದ್ದರು ಎಂದು ವರದಿಯಾಗಿದೆ.

ಉಡುಪಿ ಎಸ್ಪಿ ಸುದ್ದಿಗೋಷ್ಠಿ: ನೇಜಾರುವಿನಲ್ಲಿ ಗಗನಸಖಿ ಸಹಿತ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಆಯಾಮದಲ್ಲಿ ತನಿಖೆ ಮಾಡುತ್ತಿದ್ದೇವೆ. ಪ್ರವೀಣ್ ಅರುಣ್ ಚೌಗಲೆಯನ್ನು ವಶಕ್ಕೆ ಪಡೆದಿದ್ದು ಸಂಜೆಯೊಳಗೆ ತನಿಖೆ ಮಾಡಿ ಪೂರ್ಣ ಚಿತ್ರಣ ಸಿಗಲಿದೆ ಎಂದು ಉಡುಪಿ ಎಸ್ ಪಿ ಡಾ. ಅರುಣ್ ತಿಳಿಸಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಪ್ರವೀಣ್ ಅರುಣ್ ಚೌಗಲೆಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದೇವೆ, ಟೆಕ್ನಿಕಲ್ ಮತ್ತು ಹ್ಯೂಮನ್ ಇಂಟೆಲಿಜೆನ್ಸ್ ಮೇರೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸುತ್ತಿದ್ದೇವೆ ಸಂಜೆಯೊಳಗೆ ತನಿಖೆ ಮಾಡಿ ಪೂರ್ಣ ಚಿತ್ರಣ ಸಿಗಲಿದೆ ಎಂದರು.

ಪ್ರಕರಣಕ್ಕೆ ಸಂಬಂಧಿಸಿ ಐದು ತಂಡಗಳನ್ನು ರಚನೆ ಮಾಡಿ ವಿವಿಧ ಆಯಮಗಳಲ್ಲಿ ತನಿಖೆ ನಡೆಸಲಾಗಿತ್ತು. ಮಾಹಿತಿಯಂತೆ ಆರೋಪಿಯನ್ನು ಕುಡುಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಶಕ್ಕೆ ಪಡೆದು ಉಡುಪಿಗೆ ಕರೆದುಕೊಂಡು ಬರಲಾಗಿದೆ. ಇದೀಗ ಆತನನ್ನು ವಿಚಾರಣೆಗೊಳಪಡಿಸಿದ್ದು ಇನ್ನಷ್ಟೇ ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ ಎಂದರು. ನಮ್ಮ ಮಾಹಿತಿ ಪ್ರಕಾರ ಆತ ಸಿ.ಐ.ಎಸ್.ಎಫ್. ಹಾಗೂ ಸಿ.ಆರ್.ಪಿ.ಎಫ್.ನಲ್ಲಿ ಇರಲಿಲ್ಲ ಎಂಬುದು ತಿಳಿದು ಬಂದಿದೆ. ಆತ ಸಿವಿಲ್ ಪೊಲೀಸ್ ನಲ್ಲಿ ಕರ್ತವ್ಯ ನಿರ್ವಹಿಸಿರಬಹುದು ಎಂಬ ಮಾಹಿತಿ ದೊರೆತಿದೆ ಎಂದರು.

Leave a Reply

Your email address will not be published. Required fields are marked *

You may have missed

error: Content is protected !!