ಫೋಟೊ ಶೂಟ್ ವೇಳೆ ಅಪರಿಚಿತರ ಗುಂಪಿನಿಂದ ಚೂರಿ ಇರಿತ: ಯುವಕನಿಗೆ ಸಾವು
ದೊಡ್ಡಬಳ್ಳಾಪುರ: ಫೋಟೋ ಶೂಟ್ ವೇಳೆ ಅಪರಿಚಿತರ ಗುಂಪೊಂದು 22 ವರ್ಷದ ಯುವಕನಿಗೆ ಚಾಕುವಿನಿಂದ ಇರಿದು ಸಾಯಿಸಿದ್ದಾರೆ.
ಈ ದುರ್ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ರಾಮೇಶ್ವರ ಸಮೀಪದ ಡಾರ್ಕ್ ಫ್ಯಾಮಿಲಿ ರೆಸ್ಟೋರೆಂಟ್ ಬಳಿ ನಡೆದಿದೆ.
ಕಿಡಿಕೇಡಿಗಳ ಅಟ್ಟಹಾಸಕ್ಕೆ ಬಲಿಯಾದ ಮೃತ ಯುವಕನ ಹೆಸರು ಸೂರ್ಯ. ಐಟಿಐ ಓದುತ್ತಿದ್ದ ಸೂರ್ಯ ದೊಡ್ಡಬಳ್ಳಾಪುರ ನಗರದ ಕಚೇರಿಪಾಳ್ಯದ ನಿವಾಸಿ ಎಂದು ತಿಳಿದು ಬಂದಿದೆ.
ನಿನ್ನೆ ಭಾನುವಾರ ಆಗಿದ್ದರಿಂದ ಕಾಲೇಜಿಗೆ ರಜೆಯಿತ್ತು. ಆದ್ದರಿಂದ ಸೂರ್ಯ ತನ್ನ ನಾಲ್ವರು ಸ್ನೇಹಿತರೊಂದಿಗೆ ಫೋಟೋಶೂಟ್ಗೆಂದು ತೆರಳಿದ್ದ. ಖಾಸಗಿ ಡಾಬಾದ ಮುಂಭಾಗ ಅಲಂಕರಿಸಲಾಗಿದ್ದ ಸೀನರಿ ಬಳಿ ಫೋಟೋ ತೆಗೆಯುವಂತೆ ಕಿಡಿಗೇಡಿಗಳು ಸೂರ್ಯ & ಫ್ರೆಂಡ್ಸ್ ಜೊತೆ ಕಿರಿಕ್ ತೆಗೆದಿದ್ದರು.
ಸರಿ ಎಂದು ಒಪ್ಪಿ ಫೋಟೋವನ್ನೂ ತೆಗೆದಿದ್ದಾರೆ ಬಳಿಕ ಅಪರಿಚಿತರ ಗುಂಪು ಯುವಕರು ಫೋಟೋ ತಗೆದಿದ್ದ ಕ್ಯಾಮೆರಾ ಕಿತ್ತುಕೊಂಡು ನಾಲ್ವರು ಯುವಕರ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಸೂರ್ಯನಿಗೆ ಚಾಕುವಿನಿಂದ ಚುಚ್ಚಿದ್ದಾರೆ ಎಂದು ತಿಳಿದು ಬಂದಿದೆ.





