ಉಡುಪಿ: ಮೀನುಗಾರಿಕಾ ಬೋಟ್ ನಿಂದ ಸಮುದ್ರಕ್ಕೆ ಬಿದ್ದ ಕಾರ್ಮಿಕ: 43 ಗಂಟೆಗಳ ಕಾಲ ಸಮುದ್ರದಲ್ಲಿ ಜೀವ ಉಳಿಸಿಕೊಂಡದ್ದು ಹೇಗೆ ಗೊತ್ತೇ?
ಉಡುಪಿ: ಮೀನುಗಾರಿಕೆ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೋಟ್ ನಿಂದ ಸಮುದ್ರಕ್ಕೆ ಬಿದ್ದ ತಮಿಳುನಾಡು ಮೂಲದ ಮೀನುಗಾರರೊಬ್ಬರು ಸತತ 43 ಗಂಟೆಗಳ ಕಾಲ ಸಮುದ್ರದಲ್ಲಿ ಈಜುತ್ತಾ ಜೀವ ಉಳಿಸಿಕೊಂಡ ಘಟನೆ ಉಡುಪಿ ಜಿಲ್ಲೆಯ ಗಂಗೊಳ್ಳಿಯಲ್ಲಿ ನಡೆದಿದೆ.
ಎರಡು ದಿನಗಳ ಹಿಂದೆ ಗಂಗೊಳ್ಳಿಯಿಂದ ಸುಮಾರು 14 ನಾಟಿಕಲ್ ಮೈಲ್ ದೂರ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ತಮಿಳುನಾಡು ಮೂಲದ ಬೋಟ್ ನಿಂದ ಸುಮಾರು 25 ವರ್ಷ ಪ್ರಾಯದ ಓರ್ವ ಮೀನುಗಾರ ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದರು.
ಅವರನ್ನು ಕಳೆದ ಎರಡು ದಿನಗಳಿಂದ ತಮಿಳುನಾಡು ಮೀನುಗಾರರು ಹುಡುಕುತ್ತಿದ್ದರು. ಇಂದು ಗಂಗೊಳ್ಳಿಯಿಂದ ತೆರಳುತ್ತಿದ್ದ ಮೀನುಗಾರಿಕಾ ಬೋಟ್ ನವರಿಗೆ ಈ ಮೀನುಗಾರ ಕಾಣ ಸಿಕ್ಕಿದ್ದಾರೆ.
ಸರಿಸುಮಾರು ಎರಡು ದಿನಗಳ ಕಾಲ ನಿರಂತರವಾಗಿ ಈಜಿ ಬಸವಳಿದಿದ್ದ ಮೀನುಗಾರ ಸಂಪೂರ್ಣವಾಗಿ ನಿತ್ರಾಣಗೊಂಡಿದ್ದರು.
ಮೀನುಗಾರನಿಗೆ ಪ್ರಥಮ ಚಿಕಿತ್ಸೆ ನೀಡಿ ರಕ್ಷಿಸಿದ ಗಂಗೊಳ್ಳಿಯ ಮೀನುಗಾರರು ಬಳಿಕ ಅವರನ್ನು ತಮಿಳುನಾಡಿನ ಮೀನುಗಾರರಿಗೆ ಹಸ್ತಾಂತರಿಸಿದ್ದಾರೆ.
ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದ ಮೀನುಗಾರನ ಶವವಾದರೂ ದೊರೆಯ ಬಹುದೆಂದು ಹುಡುಕಾಡುತ್ತಿದ್ದ ತಮಿಳುನಾಡಿನ ಮೀನುಗಾರರಿಗೆ ಈತ ಸಮುದ್ರದಲ್ಲಿ ಜೀವಂತವಾಗಿ ಸಿಕ್ಕಿರುವುದನ್ನು ಕಂಡು ಶಾಕ್ ಆಗಿದೆ.
ಈ ನಡುವೆ ಗಂಗೊಳ್ಳಿಯ ಮೀನುಗಾರರು ನಾಪತ್ತೆಯಾಗಿದ್ದ ಮೀನುಗಾರನನ್ನು ರಕ್ಷಿಸಿದ ಸಂತಸದಲ್ಲಿದ್ದಾರೆ.





