ಆಟೋ -ಟ್ಯಾಂಕರ್ ನಡುವೆ ಮುಖಾಮುಖಿ: ಆಟೋದಲಿದ್ದ ಒಂದೇ ಕುಟುಂಬದ 6 ಮಂದಿ ಮೃತ್ಯು
ಕಲಬುರಗಿ: ಆಟೋ – ಟ್ಯಾಂಕರ್ ಮುಖಾಮುಖಿ ಡಿಕ್ಕಿಯಾಗಿ ಆಟೋದಲಿ ಇದ್ದ 3 ತಿಂಗಳ ಮಗು ಸೇರಿ ಒಂದೇ ಕುಟುಂಬದ ಒಟ್ಟು 6 ಮಂದಿ ಸಾವನ್ನಪ್ಪಿದ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಸಮೀಪದ ಹಲಕರ್ಟಾ ಎಂಬಲ್ಲಿ ನಡೆದಿದೆ.
ಮೃತರನ್ನು ನಾಜ್ಮಿನ್ ಬೇಗಂ(28), ಬೀಬಿ ಫಾತಿಮಾ(12), ಅಬೂಬಕರ್(4), ಬೀಬಿ ಮರಿಯಮ್(3 ತಿಂಗಳು), ಮೊಹಮ್ಮದ್ ಪಾಷಾ(20) ಹಾಗೂ ಆಟೋ ಚಾಲಕ ಬಾಬಾ(35) ಎಂದು ಗುರುತಿಸಲಾಗಿದೆ.
ಇವರ ಜೊತೆಗಿದ್ದ 10 ವರ್ಷದ ಬಾಲಕ ಮುಹಮ್ಮದ್ ಹುಸೇನ್ ಗಂಭೀರವಾಗಿ ಗಾಯಗೊಂಡಿದ್ದು ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದು ಬಂದಿದೆ.
ಮೃತಪಟ್ಟವರೆಲ್ಲೂ ನಾಲವಾರ ಗ್ರಾಮದ ಒಂದೇ ಕುಟುಂಬದವರಾಗಿದ್ದು ಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡಿಸಲು ಚಿತ್ತಾಪುರಕ್ಕೆ ಹೋಗಿ ವಾಪಸ್ ಗ್ರಾಮಕ್ಕೆ ಬರುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಈ ಬಗ್ಗೆ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ತನಿಖೆ ಮುಂದುವರೆದಿದೆ.





