ಸುಳ್ಯ: ಕರಾವಳಿಗೂ ಕಾಡಿದ ಹುಲಿ ಉಗುರು : ಲಾಕೆಟ್ ಧರಿಸಿದ್ದ ಸುಳ್ಯದ ಮಹಿಳೆಗೆ ಅರಣ್ಯಾಧಿಕಾರಿಗಳ ಬುಲಾವ್..!
ಸುಳ್ಯ : ನಾಡಿನಾದ್ಯಾಂತ ಕಾಡಿ ಜನರನ್ನು ಪರಚುತ್ತಿರುವ ಹುಲಿ ಉಗುರು ಇದೀಗ ಕರಾವಳಿಗೂ ಕಾಡಲು ಆರಂಭಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ನಗರ ಪಂಚಾಯತ್ ಉದ್ಯೋಗಿ ಕೊರಳಲ್ಲಿ ಹುಲಿ ಉಗುರು ಮಾದರಿ ಇದ್ದ ಫೋಟೊಗಳು ವೈರಲ್ ಆದ ಕಾರಣ ಅರಣ್ಯಾಧಿಕಾರಿಗಳಿಂದ ಬುಲಾವ್ ಬಂದಿದೆ.
ಸುಳ್ಯ ನಗರ ಪಂಚಾಯತ್ ಸಿಬ್ಬಂದಿಗಳು ತೆಗೆಸಿಕೊಂಡಿದ್ದ ಪೋಟೋವೊಂದರಲ್ಲಿ ಇರುವ ಶಶಿಕಲಾ ಅವರ ಕೊರಳಿನಲ್ಲಿ ಹುಲಿ ಉಗುರನ್ನು ಹೋಲುವ ಲೋಕೆಟ್ ಕಂಡುಬರುತ್ತಿತ್ತು. ಈ ಪೋಟೋಗಳು ಎಲ್ಲೆಡೆ ವೈರಲ್ ಆಗತೊಡಗಿತ್ತು. ಈ ಹಿನ್ನಲೆಯಲ್ಲಿ ಸುಳ್ಯ ಅರಣ್ಯ ಇಲಾಖೆಯವರು ಶಶಿಕಲಾ ಅವರನ್ನು ಸಂಪರ್ಕಿಸಿ ಕಚೇರಿಗೆ ಬರುವಂತೆ ಸೂಚಿಸಿದ್ದರು. ಶಶಿಕಲಾ ಅವರು ಆ ಲಾಕೆಟ್ ನೊಂದಿಗೆ ವಲಯಾರಣ್ಯಾಧಿಕಾರಿಗಳ ಕಚೇರಿಗೆ ತೆರಳಿ ಅದನ್ನು ಅಲ್ಲಿ ಒಪ್ಪಿಸಿದ್ದಾರೆ. ಇದು ಅಸಲಿ ಹುಲಿ ಉಗುರಿನ ಲೋಕೆಟ್ ಅಲ್ಲ. ಮಾರಾಟ ಮಾಡಲು ಬಂದವರಿಂದ ನನ್ನ ತಾಯಿ ಖರೀದಿಸಿ, ಧರಿಸುತ್ತಿದ್ದರು. ನಾನು ಕೂಡಾ ಅನೇಕ ವರ್ಷಗಳಿಂದ ಉಪಯೋಗಿಸುತ್ತಿದ್ದೇನೆ. ಪೋಟೋ ವೈರಲ್ ಆದ್ದರಿಂದ ಅರಣ್ಯ ಇಲಾಖೆಯವರು ಫೋನ್ ಮಾಡಿದಾಗ ನಾನೇ ಹೋಗಿ ಲೋಕೆಟ್ ಕೊಟ್ಟು ಬಂದಿದ್ದೇನೆ ಎಂದು ಶಶಿಕಲಾ ಅವರು ಮಾಹಿತಿ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಶಶಿಕಲಾ ಅವರ ಹುಲಿ ಉಗುರು ಧರಿಸಿರುವ ಪೋಟೋ ವೈರಲ್ ಆಗಿರುವುದರಿಂದ ಅವರನ್ನು ಸಂಪರ್ಕಿಸಿದೆವು. ಅವರೇ ಕಚೇರಿಗೆ ಬಂದು ಲೋಕೆಟ್ ಕೊಟ್ಟು ಇದು ನನ್ನಲ್ಲಿ ಕೆವು ವರ್ಷದಿಂದ ಇದೆ. ಇದು ನಕಲಿ ಲೋಕೆಟ್, ಒರಿಜಿನಲ್ ಅಲ್ಲ ಎಂದು ಹೇಳಿದ್ದಾರೆ. ಲೋಕೆಟನ್ನು ನಾವು ಪಡೆದುಕೊಂಡಿದ್ದು, ಲ್ಯಾಬ್ ನಲ್ಲಿ ಪರೀಕ್ಷೆ ನಡೆಸುತ್ತೇವೆ. ಒರಿಜಿನಲ್ ಆಗಿದ್ದರೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದೆಂದು ಅರಣ್ಯ ಇಲಾಖೆಯವರು ಸ್ಪಷ್ಟಪಡಿಸಿದ್ದಾರೆ.