ಮಂಗಳೂರು: ರಸ್ತೆ ಬದಿಯ ಚರಂಡಿಗೆ ಬಿದ್ದ ಬೈಕ್: ಫರಂಗಿಪೇಟೆಯ ಯುವಕ ಮೃತ್ಯು
ಮಂಗಳೂರು: ಬೈಕೊಂದು ಸವಾರನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದ ಪರಿಣಾಮ ಸಹಸವಾರ ಮೃತ ಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 73ರ ಮಂಗಳೂರಿನ ನಂತೂರು – ಪಡೀಲ್ ನಡುವಿನ ನಿಡ್ಡೇಲ್ ಕ್ರಾಸ್ ಬಳಿ ಶನಿವಾರ ನಸುಕಿನ ವೇಳೆ ನಡೆದಿದೆ.
ಫರಂಗಿಪೇಟೆ ನಿವಾಸಿ ಕೀರ್ತಿಕ್ (21) ಮೃತಪಟ್ಟವರು.
ಮುಂಜಾನೆ ಸುಮಾರು 3.25ರ ಸುಮಾರಿಗೆ ಘಟನೆ ನಡೆದಿದೆ. ಸುಶೀತ್ ಎಂಬವರು ಬೆಳಗಿನ ಜಾವ ಬೈಕ್ ನಲ್ಲಿ ಕೀರ್ತಿಕ್ ಅವರನ್ನು ಹಿಂಬದಿ ಸವಾರರನ್ನಾಗಿ ಕುಳ್ಳಿರಿಸಿಕೊಂಡು ನಂತೂರು ಕಡೆಯಿಂದ ಪಡೀಲ್ ಕಡೆಗೆ ರಾಷ್ಟ್ರೀಯ ಹೆದ್ದಾರಿ 73 ರಲ್ಲಿ ಚಲಾಯಿಸಿಕೊಂಡು ಹೋಗುತ್ತಿದ್ದಾಗ ನಿಡ್ಡೇಲ್ ಕ್ರಾಸ್ ಬಳಿ ತಲುಪುತ್ತಿದ್ದಂತೆ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಉರುಳಿ ಬಿದ್ದಿದೆ. ಈ ಸಂದರ್ಭದಲ್ಲಿ ಸಹ ಸವಾರನಾಗಿದ್ದ ಕೀರ್ತಿಕ್ ತೀವ್ರ ಗಾಯಗೊಂಡಿದ್ದಾರೆ.
ಸುಶೀತ್ ಅವರು ತನ್ನ ಸ್ನೇಹಿತ ನಿತೇಶ್ ಕುಮಾರ್ ಗೆ ವಿಷಯ ತಿಳಿಸಿದ್ದು, ನಿತೇಶ್ ಅವರು ಬಂದು ಸ್ಥಳೀಯ ಜನರ ಸಹಕಾರದೊಂದಿಗೆ ಕೀರ್ತಿಕ್ ನನ್ನು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಅವರು ಮೃತ ಪಟ್ಟಿದ್ದಾರೆ. ಮಂಗಳೂರಿನ ಟ್ರಾಫಿಕ್ ಪೂರ್ವ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.




