ಹಾಸನ ಜನಪ್ರಿಯ ಆಸ್ಪತ್ರೆಯ ಮತ್ತೊಂದು ಸಾಧನೆ: ಮೂಳೆ ಕ್ಯಾನ್ಸರ್‌ಗೆ ಕೃತಕ ಮೂಳೆ ಅಳವಡಿಕೆ ಯಶಸ್ವಿ ಶಸ್ತ್ರ ಚಿಕಿತ್ಸೆ: ವಿಟ್ಲದ ಡಾ| ಅಬ್ದುಲ್ ಬಷೀರ್ ವಿ.ಕೆ ಸಾರಥ್ಯದಲ್ಲಿ ಸಾಧನೆ
ಹಾಸನ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಜನಪ್ರಿಯ ಆಸ್ಪತ್ರೆಯಲ್ಲಿ ಮೂಳೆ ಕ್ಯಾನ್ಸರ್‌ಗೆ ಕೃತಕ ಮೂಳೆಯ ಬದಲಾವಣೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಜನಪ್ರಿಯ ಆಸ್ಪತ್ರೆಯ ಮುಖ್ಯಸ್ಥ ಡಾ| ಅಬ್ದುಲ್ ಬಷೀರ್ ವಿ.ಕೆ ತಿಳಿಸಿದರು.
ಆಸ್ಪತ್ರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಆಸ್ಪತ್ರೆಗೆ ಇತ್ತೀಚಿಗೆ ಚನ್ನರಾಯ ಪಟ್ಟಣ ತಾಲೂಕಿನ 23 ವರ್ಷ ವಯಸ್ಸಿನ ಹೆಣ್ಣುಮಗಳು ಜನಪ್ರಿಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದರು. ಅವರಿಗೆ ತೀರಾ ನಡೆಯಲಿಕ್ಕೆ ಆಗದೆ ಎಡಗಾಲಿನ ತೊಡೆಯಿಂದ ಕೆಳಗೆ ಪಾದದವರೆಗೂ ಸಂಪೂರ್ಣವಾಗಿ ಊದುಕೊಂಡು ತೊಡೆಯ ಮೂಳೆ (ನಮ್ಮ ಶರೀರದ ಅತ್ಯಂತ ದೊಡ್ಡ ಮೂಳೆ) ಶೇಕಡ 90ರಷ್ಟು ನಶಿಸಿಹೋಗಿತ್ತು. ಅವರ ದೈನಂದಿನ ಕ್ರಿಯೆಗಳು ಹಾಸಿಗೆಯಲ್ಲಿ ಮಾಡುವ ಪರಿಸ್ಥಿತಿಯಲ್ಲಿದ್ದರೂ, ಅವರು ಬೆಂಗಳೂರು ಮತ್ತು ಮಂಗಳೂರಿನಂತಹ ಮಹಾನಗರಗಳಲ್ಲಿ ಚಿಕಿತ್ಸೆಗೆ ಹೋದಾಗ ಪರೀಕ್ಷಿಸಿದ ವೈದ್ಯರು ಶಸ್ತ್ರಚಿಕಿತ್ಸೆ ಮಾಡಲು ತಿಳಿಸಿದರು ಮತ್ತು ಶಸ್ತ್ರಚಿಕಿತ್ಸೆ ಶೇಕಡ 80ರಷ್ಟು ಯಶಸ್ವಿಯಾಗಲ್ಲ ಮಾತ್ರವಲ್ಲ ಕಾಲನ್ನು ತೆಗೆಯುವ ಪರಿಸ್ಥಿತಿ ಬರಬಹುದೆಂದು ಹೇಳಿದರು. ಆದರೆ ಅವರ ಆರ್ಥಿಕವಾಗಿ ಹಿಂದುಳಿದಿದ್ದರಿಂದ ಚಿಕಿತ್ಸೆಗಾಗಿ ಹಾಸನದ ಜನಪ್ರಿಯ ಆಸ್ಪತ್ರೆಗೆ ಬಂದಂತಹ ಸಂದರ್ಭದಲ್ಲಿ ಅವರನ್ನು ಪರೀಕ್ಷಿಸಿದ ಕೀಲು ಮತ್ತು ಮೂಳೆ ತಜ್ಞರಾದ ಡಾ. ವಿ.ಕೆ ಅಬ್ದುಲ್ ಬಶೀರ್ ಮತ್ತು ಡಾ.ರಾಜತ್ ಕ್ಷಕಿರಣ ಮತ್ತು ಸಿಟಿ ಸ್ಕ್ಯಾನ್ ಮಾಡಿದಾಗ ಕಾಲಿನ ತೊಡೆ ಭಾಗದ ಮೂಳೆಗೆ ಕ್ಯಾನ್ಸರ್ ಆಗಿ ಸಂಪೂರ್ಣ ವಾಗಿ ತಿಂದು ಹಾಕಿತ್ತು, ಅವರಿಗೆ ಹಾಸನದಲ್ಲಿ ಹಿಂದೆಂದೂ ಮಾಡದಂತಹ ವಿಶೇಷವಾದ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇತ್ತು. ಹಾಗಾಗಿ ಮೂಳೆಯನ್ನು ತೆಗೆದು ಕೃತಕ ಮೂಳೆ ಜೋಡಣೆ ಮಾಡಲಾಯಿತು. ಎಂದು ವಿವರಿಸಿದರು. ಸುಮಾರು 8.00 ಗಂಟೆಗಳ ಕಾಲ ತಜ್ಞವೈದ್ಯರಾದ ಡಾ.ವಿ.ಕೆ ಅಬ್ದುಲ್ ಬಶೀರ್, ಡಾ.ರಜತ್, ಡಾ.ಲಿಂಗರಾಜ್, ಡಾ.ನವನೀತ್ ತಂಡದ ಪರಿಶ್ರಮದಿಂದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮಾಡಲಾಯಿತು. ಇದು ಹಾಸನ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಕೃತಕ ಮೂಳೆಯ ಜೋಡಣೆ ಕಾರ್ಯವಾಗಿದೆ. ಶಸ್ತ್ರಚಿಕಿತ್ಸೆಯ ನಂತರ ಗಾಯಾಳು ಎರಡೇ ದಿನಕ್ಕೆ ನಡೆಯಲು ಆರಂಭಿಸಿದರು. ಗಾಯಾಳು ಈ ಹಿಂದೆ ಗಾಮೆರ್‌ಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದು, ಸುಮಾರು ಎರಡು ವರ್ಷಗಳ ಕಾಲ ಕೆಲಸ ಮಾಡಲು ಆಗುತ್ತಿರಲಿಲ್ಲ. ಶಸ್ತ್ರಚಿಕಿತ್ಸೆಯ ನಂತರ ಮತ್ತೆ ಗಾಮೆರ್‌ಂಟ್ಸ್‌ನಲ್ಲಿ ಕೆಲಸ ಮಾಡುತ್ತಾ ಸುಂದರ ಬದುಕನ್ನು ಕಟ್ಟಿಕೊಂಡಿದ್ದಾರೆ ಎಂದರು.




