2024 ರ ಲೋಕಸಭಾ ಚುನಾವಣೆಯಲ್ಲಿ ಪ್ಯಾಶಿಸ್ಟರನ್ನು ಸೋಲಿಸಲು ಸಿ.ಪಿ.ಐ.ಎಂ.ಎಲ್. ಲಿಬರೇಷನ್ ಪಾಲಿಟ್ ಬ್ಯೂರೋ ಸದಸ್ಯರಾದ ಕಾಮ್ರೇಡ್ ಶಂಕರ್ ಕರೆ
ಬಂಟ್ವಾಳ: ಭಾರತೀಯ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ,ಲೆನಿನ್ ವಾದಿ) ಲಿಬರೇಷನ್ ಇದರ ಬಂಟ್ವಾಳ ತಾಲೂಕು ಸಮ್ಮೇಳನವು ಇಂದು ಬಿ.ಸಿ.ರೋಡ್ ನಲ್ಲಿ ಜರುಗಿತು.
ಸಮ್ಮೇಳನದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ, ಪಕ್ಷದ ಪಾಲಿಟ್ ಬ್ಯೂರೋ ಸದಸ್ಯರಾದ ಕಾಮ್ರೇಡ್ ಶಂಕರ್ ರವರು ಮಾತನಾಡಿ, ಇಂದು ದೇಶದ ಆಡಳಿತವು ಪ್ಯಾಶಿಸ್ಟರ ಹತೋಟಿಯಲ್ಲಿದ್ದು, ಅವರು ಈ ದೇಶದ, ಸಂವಿಧಾನವನ್ನು ನಾಶ ಮಾಡಿ, ತೆರೆಮರೆಯಲ್ಲಿ ಮನುವಾದಿ ವ್ಯವಸ್ಥೆ ಯನ್ನು ಜಾರಿಗೆ ತರಲು ಹುನ್ನಾರಗಳು ನಡೆಯುತ್ತಿದ್ದು ಅದರ ಭಾಗವಾಗಿಯೇ ಎಂಬಂತೆ, ಸರಕಾರದ ವಿರುದ್ಧ ಧ್ವನಿಯೆತ್ತುವವರನ್ನು ಕೊಲೆ ಮಾಡಲಾಗುತ್ತಿದೆ ಹಾಗೂ ಯು.ಎ.ಪಿ.ಎ ಮುಖಾಂತರ ಅವರನ್ನು ಜೈಲಿಗೆ ತಳ್ಳಲಾಗುತ್ತಿದೆ ಎಂದು ಆರೋಪಿಸಿದರು. ಈ ದೇಶದ ಸಂಸದೀಯ ವ್ಯವಸ್ಥೆಯನ್ನೇ ನಾಶ ಮಾಡುವ ಮೂಲಕ ಒಂದು ದೇಶ ಒಂದು ಚುನಾವಣೆ ಎಂಬುವುದನ್ನು ಜಾರಿಮಾಡಲು ವಿವಿಧ ಷಡ್ಯಂತ್ರಗಳು ನಡೆಯುತ್ತಿದ್ದು, ಇವೆಲ್ಲವೂ, ನಮ್ಮ ದೇಶದ, ಬಹು ಸಂಸ್ಕೃತಿಯ ಪ್ರಜಾಪ್ರಭುತ್ವ ನೀತಿಗೆ ಅಪಾಯಕಾರಿಗಳಾಗಿವೆ. ಹೀಗಿರುವ ಪ್ಯಾಶಿಸಂ ಅನ್ನು ತೊಲಗಿಸಲು ಮುಂಬರುವ ಚುನಾವಣೆಯಲ್ಲಿ ಎಲ್ಲಾ ಜಾತ್ಯಾತೀತ, ಎಡ ಶಕ್ತಿಗಳು ಒಂದಾಗಿ ಪ್ರಯತ್ನ ನಡೆಸುತ್ತಿದ್ದು، ಇದರಲ್ಲಿ ಸಿ.ಪಿ.ಐ.ಎಂ.ಎಲ್. ಪಕ್ಷ ಪ್ರಮುಖ ಪಾತ್ರ ವಹಿಸಲಿದೆಯೆಂದು ಅವರು ತಿಳಿಸಿದರು.
ಮುಂಬರುವ ಚುನಾವಣೆಯಲ್ಲಿ ಬಿ.ಜೆ.ಪಿ ಯನ್ನು ಸೋಲಿಸುವ ಮೂಲಕ ಈ ದೇಶದ ಸಂವಿಧಾನವನ್ನು ಉಳಿಸಲು ಎಲ್ಲರೂ ಒಗ್ಗಟ್ಟಾಗಬೇಕೆಂದು ಅವರು ಜನತೆಗೆ ಕರೆ ನೀಡಿದರು.
ಸಮ್ಮೇಳನವನ್ನು ಪಕ್ಷದ ರಾಜ್ಯ ಸಮಿತಿ ಸದಸ್ಯರಾದ ಕಾಮ್ರೇಡ್ ಮೋಹನ್ ಕೆ.ಇ. ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಪಕ್ಷದ ಮಂಗಳೂರು ತಾಲೂಕು ಕಾರ್ಯದರ್ಶಿ ಕಾಮ್ರೇಡ್ ಭರತ್ ಕುಮಾರ್ ಮಾತನಾಡಿದರು ಸಮ್ಮೇಳನದ ಅದ್ಯಕ್ಷತೆಯನ್ನು ಕಾಮ್ರೇಡ್ ರಾಮಣ್ಣ ವಿಟ್ಲ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸಾಮಾಜಿಕ ಕಾರ್ಯಕರ್ತರಾದ ರಾಜಾ ಚೆಂಡ್ತಿಮಾರ್, ಸರಸ್ವತಿ ಮಾಣಿ, ಅಶ್ರಫ್ ಕೊಯಿಲ ಭಾಗವಹಿಸಿದ್ದರು.
ತುಳಸೀದಾಸ್ ವಿಟ್ಲ ಸ್ವಾಗತಿಸಿ ಸಮ್ಮೇಳನದ ವರದಿ ಮಂಡಿಸಿದರು.
ಸಮ್ಮೇಳನದಲ್ಲಿ ನೂತನ ತಾಲೂಕು ಸಮಿತಿ ರಚಿಸಲಾಯಿತು
ಕಾರ್ಯದರ್ಶಿಯಾಗಿ ತುಳಸೀದಾಸ್ ವಿಟ್ಲ, ಸದಸ್ಯರುಗಳಾಗಿ ಶಿವರಾಯ ಪ್ರಭು, ಸರಸ್ವತಿ ಮಾಣಿ, ದಿನೇಶ ಆಚಾರಿ ಮಾಣಿ, ದೇವಪ್ಪ ಗೌಡ ಕನ್ಯಾನ, ಸಜೇಶ್ ವಿಟ್ಲ, ಬಾಲಕೃಷ್ಣ ಚೇಳೂರು, ರಾಜಾ ಚೆಂಡ್ತಿಮಾರ್ , ಹಮೀದ್ ಕುಕ್ಕಾಜೆ, ಲಿಯಾಖತ್ ಖಾನ್, ಆನಂದ ಶೆಟ್ಟಿಗಾರ್ ಆಯ್ಕೆಯಾದರು.



