March 18, 2026

ಬಂಟ್ವಾಳ: ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡ ಪಾಣೆಮಂಗಳೂರು ಸೇತುವೆಯಲ್ಲಿ ಬಿರುಕು:
ಎಚ್ಚರಿಕೆಯಿಂದ ವಾಹನ ಸಂಚಾರ ಮಾಡುವಂತೆ ಮನವಿ

0
image_editor_output_image-157695327-1696784711455

ಬಂಟ್ವಾಳ: ಬ್ರಿಟಿಷ್ ಕಾಲದಲ್ಲಿ ನಿರ್ಮಾಣವಾದ ಪಾಣೆಮಂಗಳೂರು ಉಕ್ಕಿನ ಸೇತುವೆಯ ಮಧ್ಯಭಾಗದಲ್ಲಿ ಸಣ್ಣದಾದ ಬಿರುಕು ಕಾಣಿಸಿಕೊಂಡಿದ್ದು, ವಾಹನ ಸವಾರರು ಎಚ್ಚರಿಕೆಯಿಂದ ಸವಾರಿ ಮಾಡುವಂತೆ ಸ್ಥಳೀಯರು ತಿಳಿಸಿದ್ದಾರೆ.

ಅಕ್ಕರಂಗಡಿ ಅಂದರೆ ಪಾಣೆಮಂಗಳೂರು ಕಡೆಯಿಂದ ಬರುವಾಗ ಸುಮಾರು ನಾಲ್ಕು ಪಿಲ್ಲರ್ ಗಳ ಪೈಕಿ ಬಿರುಕು ಕಾಣಿಸಿಕೊಂಡಿದೆ.
ಡಾಮರು ಎದ್ದು ಹೋಗಿದೆ, ಸಣ್ಣ ಗುಂಡಿಯಾಗಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ರಾತ್ರಿ ವೇಳೆಯಾಗಿರುವುದರಿಂದ ಇದರ ತೀವ್ರತೆ ಮತ್ತು ಸ್ಪಷ್ಟವಾದ ಚಿತ್ರಣ ಕಾಣುತ್ತಿಲ್ಲ.
ಆದರೆ ಆಯುಷ್ಯ ಮುಗಿದಿರುವ ಸೇತುವೆಯಲ್ಲಿ ಬಿರುಕು ಕಂಡರೂ ಆಶ್ಚರ್ಯವಲ್ಲ.

ಈ ಹಿಂದೆ ಬಿಸಿರೋಡು ಕಡೆಯಿಂದ ಬರುವ ಗೂಡಿನಬಳಿಯ ಭಾಗದಲ್ಲಿ ಸೇತುವೆ ಕುಸಿತ ಕಂಡು ಬಂದಿತ್ತು. ಹಾಗಾಗಿ ನೂತನ ಸೇತುವೆ ಆ ಸಂದರ್ಭದಲ್ಲಿ ನಿರ್ಮಾಣ ಮಾಡಲಾಗಿತ್ತು.
ನೂತನ ಸೇತುವೆ ‌ನಿರ್ಮಾಣವಾಗುವವರೆಗೆ ಈ ಸೇತುವೆ ಯಾವುದೇ ಘನ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿರಲಿಲ್ಲ. ಆ ಬಳಿಕ ಕುಸಿತ ಕಂಡ ಭಾಗದಲ್ಲಿ ಇಲಾಖೆ ರಿಪೇರಿ ಕಾರ್ಯ ಮಾಡಿತ್ತು. ಇದೀಗ ಬಸ್ ಸಹಿತ ಅನೇಕ ಘನ ವಾಹನಗಳ ಸಂಚಾರ ನಡೆಸುತ್ತಿದ್ದವು.

ಆದರೆ ಇಲಾಖೆ ಅವಾಗಿನಿಂದಲೇ ಘನ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲ ಎಂಬ ನಾಮಫಲಕವನ್ನು ಅಳವಡಿಸಿ ಎಚ್ಚರಿಕೆಯನ್ನು ನೀಡಿದ್ದು, ಅಪಾಯದ ಬಗ್ಗೆ ಮುನ್ಸೂಚನೆ ನೀಡಿತ್ತು.
ಇವರ ಮಾತಿಗೆ ಬೆಲೆ ಕೊಡದೆ ಪಾಣೆಮಂಗಳೂರು ಪೇಟೆಯನ್ನು ಉಳಿಸಬೇಕು ಎಂಬ ಕೆಲವರ ಮೊಂಡು ವಾದ ಮತ್ತು ಬೇಡಿಕೆಯನ್ನು ಪೂರೈಸಲು ಬಸ್ ಸಹಿತ ಇತರ ವಾಹನಗಳು ಸಂಚಾರ ಆರಂಭಿಸಿದ್ದವು.

ಇಂದು ರಾತ್ರಿ 9 ರ ಸುಮಾರಿಗೆ ಗೂಡಿನ ಬಳಿ ನಿವಾಸಿ ಮಹಮ್ಮದ್ ಮತ್ತು ಅವರು ಸ್ನೇಹಿತರು ಪಾಣೆಮಂಗಳೂರು ಕಡೆಯಿಂದ ಗೂಡಿನ ಬಳಿಗೆ ತಮ್ಮ ದ್ವಿಚಕ್ರ ವಾಹನದಲ್ಲಿ ಬರುವ ವೇಳೆ ಬಿರುಕು ಬಿಟ್ಟ ಬಗ್ಗೆ ಕಾಣಿಸಿಕೊಂಡಿದೆ. ಕೂಡಲೇ ಬಂಟ್ವಾಳ ನಗರ ಠಾಣಾ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ ಮತ್ತು ಕೆಲ ಹೊತ್ತಿನ ತನಕ ಸೇತುವೆಯಲ್ಲಿ ನಿಂತುಕೊಂಡು ವಾಹನ ಸವಾರರಿಗೆ ನಿಧಾನವಾಗಿ ಚಲಿಸುವಂತೆ ಕೋರಿದ್ದಾರೆ.

ಜೀವಹಾನಿಗೆ ಮುಂದೆ ಕ್ರಮ ವಹಿಸಿ:
‌ಕಳೆದ ನಾಲ್ಕು ವರ್ಷಗಳ ಹಿಂದೆ ಇದೇ ರೀತಿ ಬಿರುಕು ಕಾಣಿಸಿಕೊಂಡಿದ್ದ ಮುಲಾರಪಟ್ನ ಸೇತುವೆ ಮುರಿದು ಬಿದ್ದಿತ್ತು. ಅದೃಷ್ಟವಶಾತ್ ಅ ಹೊತ್ತಿಗೆ ಯಾವುದೇ ವಾಹನಗಳು ಸಂಚಾರ ಮಾಡದ ಹಿನ್ನೆಲೆಯಲ್ಲಿ ಯಾವುದೇ ಪ್ರಾಣಹಾನಿಯಾಗಿರಲಿಲ್ಲ. ಈ ಸೇತವೆ ಬಗ್ಗೆ ಸ್ಥಳೀಯರು ಮೊದಲೆ ಎಚ್ಚರಿಸಿದ್ದರು. ಆದರೆ ಇಲಾಖೆಯಾಗಲಿ ಸಾರ್ವಜನಿಕರು ಆಗಲಿ ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಸೇತುವೆ ಮುರಿದು ಬಿದ್ದಾಗ ಅವರು ನೆನಪಿಸಿದ ಬಗ್ಗೆ ಜನರು ಮಾತನಾಡಿಕೊಂಡಿದ್ದರು.
ಇಲ್ಲೂ ಅದೇ ರೀತಿ ಸಾರ್ವಜನಿಕರು ಎಚ್ಚರಿಕೆ ನೀಡುವ ಕೆಲಸ ಮಾಡಿದ್ದಾರೆ. ಇದನ್ನು ನಿರ್ಲಕ್ಷ್ಯ ಮಾಡದೆ ವಾಹನ ಸವಾರರು ಎಚ್ಚರಿಕೆ ಯಿಂದ ಇರುವುದು ಉತ್ತಮ. ಈ ಸೇತುವೆಯಿಂದ ಯಾವುದೇ ಅಪಾಯವಾಗದಂತೆ ಇಲಾಖೆ ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ವಹಿಸಿ, ಪ್ರಾಣ ಹಾನಿಯಾಗದಂತೆ ಎಚ್ಚರ ವಹಿಸಿದರೆ ಉತ್ತಮ ಎಂಬ ಮಾತುಗಳು ಕೇಳಿ ಬಂದಿವೆ.

Leave a Reply

Your email address will not be published. Required fields are marked *

You may have missed

error: Content is protected !!