ಎಲೆಕ್ಟ್ರಾನಿಕ್ ಮಳಿಗೆಯಲ್ಲಿ ಕಳ್ಳತನ: ಮೂವರು ವಿದ್ಯಾರ್ಥಿಗಳ ಪೊಲೀಸರು ಬಂಧನ
ಬೆಂಗಳೂರು: ಸಂಜಯನಗರದ ಎಲೆಕ್ಟ್ರಾನಿಕ್ ಮಳಿಗೆಯಲ್ಲಿ ಕಳ್ಳತನ ಮಾಡಿದ್ದ ಆರೋಪದಡಿ ಮೂವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.
‘ಎಚ್‌ಎಸ್ಆರ್ ಲೇಔಟ್ ನಿವಾಸಿಗಳಾದ ಪ್ರಭು, ಮೌಲೇಶ್ ಹಾಗೂ ಅಜಯ್ ಬಂಧಿತರು. ಇವರೆಲ್ಲರೂ ಬಿ.ಕಾಂ ಹಾಗೂ ಬಿಸಿಎ ವಿದ್ಯಾರ್ಥಿಗಳು. ಹಣಕ್ಕಾಗಿ ಕೃತ್ಯ ಎಸಗಿದ್ದರು. ಕಳ್ಳತನ ನಡೆದು 36 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಕಮಿಷನರ್ ಬಿ. ದಯಾನಂದ್ ತಿಳಿಸಿದರು.
‘ಐ-ಫೋನ್ ಖರೀದಿ ಮಾಡಿದ್ದ ಪ್ರಭು, ಮಳಿಗೆ ವಿಡಿಯೊ ಮಾಡಿಟ್ಟುಕೊಂಡಿದ್ದ. ಅದನ್ನೇ ಮೌಲೇಶ್ ಹಾಗೂ ಅಜಯ್‌ಗೆ ತೋರಿಸಿ ಕಳ್ಳತನಕ್ಕೆ ಸಂಚು ರೂಪಿಸಿದ್ದ. ಆರೋಪಿಗಳಿಂದ ₹50 ಲಕ್ಷ ಮೌಲ್ಯದ ಮೊಬೈಲ್, ಲ್ಯಾಪ್‌ಟಾಪ್, ಕೈ ಗಡಿಯಾರ, ಕ್ಯಾಮೆರಾಗಳನ್ನು ಜಪ್ತಿ ಮಾಡಲಾಗಿದೆ’ ಎಂದರು.




