ಕಂಬಳಬೆಟ್ಟು ದಾರುಲ್ ಉಲೂಂ ಮದರಸದಲ್ಲಿ ಬೃಹತ್ ಮೀಲಾದ್ ರ್ಯಾಲಿ

ಕಂಬಳಬೆಟ್ಟು ಮೊಹಿಯುದ್ದೀನ್ & ಇಬ್ರಾಹಿಂ ಜಮಾತ್ ಕಮಿಟಿ ಇದರ ಅಧೀನದಲ್ಲಿರುವ ದಾರುಲ್ ಉಲೂಂ ಮದರಸ ಸಾದಾತ್ ನಗರ ಕಂಬಳಬೆಟ್ಟು, ಪಿಟಿಎ ಮತ್ತು ಮಿಲಾದ್ ಸಮಿತಿ ಆಶ್ರಯದಲ್ಲಿ ಪ್ರವಾದಿ ಮಹಮ್ಮದ್ ಮುಸ್ತಫಾ (ಸ.ಅ)ರವರ ಜನ್ಮ ದಿನಾಚರಣೆಯ ಪ್ರಯುಕ್ತ ಬೃಹತ್ ಮೀಲಾದ್ ರ್ಯಾಲಿ ಜರಗಿತು. ಕಂಬಳಬೆಟ್ಟು ಮುದರ್ರಿಸ್ ಇಬ್ರಾಹಿಂ ಮದನಿ ದುಆ ನೆರವೇರಿಸಿದರು. ಬಳಿಕ ಜಮಾಅತ್ ಕಮಿಟಿಯ ಅಧ್ಯಕ್ಷರಾದ ಡಾ |ಅಬ್ದುಲ್ ಬಶೀರ್ ವಿ.ಕೆ. ರವರ ನೇತೃತ್ವದಲ್ಲಿ ಧ್ವಜಾರೋಹಣ ನಡೆಸಿ ಮಿಲಾದ್ ರ್ಯಾಲಿಗೆ ಚಾಲನೆ ನೀಡಲಾಯಿತು. ಸಾದಾತ್ ನಗರದಿಂದ ಆರಂಭಗೊಂಡ ರ್ಯಾಲಿಯು ಶಾಂತಿನಗರ ನೂರುಲ್ ಇಸ್ಲಾಂ ಮದರಸಕ್ಕೆ ತೆರಳಿ ಬಳಿಕ ದಾರುಲ್ ಉಲೂಂ ಮದರಸದಲ್ಲಿ ಸಮಾಪ್ತಿಗೊಂಡಿತು.
ರ್ಯಾಲಿಯಲ್ಲಿ ಅನೇಕ ಜಮಾಅತ್ ಬಾಂಧವರು ಸಿಹಿ ತಿಂಡಿ, ಪಾನೀಯಗಳನ್ನು ನೀಡಿ ಸಹಕರಿಸಿದರು. ಕೊನೆಗೆ ಮೌಲಿದ್ ಪಾರಾಯಣದೊಂದಿಗೆ ಕಾರ್ಯಕ್ರಮ ಅಂತ್ಯಗೊಂಡಿತು. ಕಾರ್ಯಕ್ರಮದಲ್ಲಿ ಜಮಾಅತ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ನಾಸಿರ್ ಕಂಬಳಬೆಟ್ಟು, ಉಪಾಧ್ಯಕ್ಷ ರಜಾಕ್ ಬಾಂಬೆ, ಟಿ.ಟಿ.ಎ ಅಧ್ಯಕ್ಷ ನೌಶಿನ್ ಬದ್ರಿಯಾ, ಮಿಲಾದ್ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಹಾಗೂ ಜಮಾಅತ್ ಕಮಿಟಿಯ ಪದಾಧಿಕಾರಿಗಳು ಮತ್ತು ಸದಸ್ಯರು, ಮದರಸದ ಮುಖ್ಯ ಅಧ್ಯಾಪಕರಾದ ಹನೀಫ್ ಸಖಾಫಿ, ಸಹ ಅಧ್ಯಾಪಕರಾದ ಅಶ್ರಫ್ ಮುಸ್ಲಿಯಾರ್,ಝಕರಿಯಾ ಸಖಾಫಿ ಹಾಗೂ ಹನೀಫ್ ಸಅದಿ ಉಪಸ್ಥಿತರಿದ್ದರು.
