April 5, 2025

ಸುಳ್ಯ: ಕೆವಿಜಿ ಪ್ರಾಂಶುಪಾಲ ರಾಮಕೃಷ್ಣ ಕೊಲೆ ಪ್ರಕರಣ: ಕುರುಂಜಿ ರೇಣುಕಾಪ್ರಸಾದ್‌ ಸೇರಿ 6 ಮಂದಿ ದೋಷಿ

0

ಸುಳ್ಯ: 12 ವರ್ಷದ ಹಿಂದೆ ನಡೆದ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಸುಳ್ಯ ಕೆವಿಜಿ ಪಾಲಿಟೆಕ್ನಿಕ್‌ ಪ್ರಾಂಶುಪಾಲರಾಗಿದ್ದ ಪ್ರೊ. ಎ.ಎಸ್‌ ರಾಮಕೃಷ್ಣ ಅವರ ಕೊಲೆ ಪ್ರಕರಣಕ್ಕೆ ಮಹತ್ವದ ತಿರುವು ದೊರೆತಿದೆ.

ಪ್ರೊ. ಎ. ಎಸ್. ರಾಮಕೃಷ್ಣ ಕೊಲೆ ಪ್ರಕರಣದಲ್ಲಿ ಆರು ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿ ಅಧೀನ ನ್ಯಾಯಾಲಯ ನೀಡಿದ್ದ ತೀರ್ಪು ರದ್ದುಗೊಳಿಸಿರುವ ಹೈಕೋರ್ಟ್ ಅವರನ್ನು ದೋಷಿಗಳೆಂದು ತೀರ್ಪು ನೀಡಿದೆ.

ಪ್ರಕರಣದಲ್ಲಿ ರೇಣುಕಾ ಪ್ರಸಾದ್‌ ಸೇರಿದಂತೆ ಏಳು ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿ ಪುತ್ತೂರಿನ 5ನೇ ಹೆಚ್ಚುವರಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯ ಈ ಹಿಂದೆ ಆದೇಶ ಹೊರಡಿಸಿತ್ತು

 

 

ಪ್ರಕರಣದ ಒಟ್ಟು ಏಳು ಮಂದಿ ಆರೋಪಿಗಳ ಪೈಕಿ ಡಾ| ರೇಣುಕಾ ಪ್ರಸಾದ್‌, ಮನೋಜ್‌ ರೈ, ಎಚ್‌.ಆರ್‌. ನಾಗೇಶ್‌, ವಾಮನ ಪೂಜಾರಿ, ಶರಣ್‌ ಪೂಜಾರಿ ಮತ್ತು ಶಂಕರ ಅವರನ್ನು ಮೃತ ಎ.ಎಸ್‌. ರಾಮಕೃಷ್ಣ ಅವರ ಹತ್ಯೆ ಮತ್ತು ಕೊಲೆಗೆ ಒಳಸಂಚು ರೂಪಿಸಿದ ಪ್ರಕರಣದಲ್ಲಿ ದೋಷಿಗಳೆಂದು ನ್ಯಾಯಾಲಯ ತೀರ್ಮಾನಿಸಿದೆ. ಆದರೆ, ಏಳನೇ ಆರೋಪಿಯಾಗಿದ್ದ ಎಚ್‌.ಯು. ನಾಗೇಶ್‌ ಕುಮಾರ್‌ ಅವರನ್ನು ಖುಲಾಸೆಗೊಳಿಸಿದ ಅಧೀನ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್‌ ಇದೇ ವೇಳೆ ಎತ್ತಿ ಹಿಡಿದಿದೆ. ಅಲ್ಲದೆ, ದೋಷಿಗಳಿಗೆ ಶಿಕ್ಷೆ ಪ್ರಮಾಣ ನಿಗದಿಪಡಿಸುವ ಕುರಿತು ಅ. 5ರಂದು ವಿಚಾರಣೆ ನಡೆಸುವುದಾಗಿ ನ್ಯಾಯಪೀಠ ಇದೇ ವೇಳೆ ಹೇಳಿದೆ.

ಕುರುಂಜಿ ವೆಂಕಟರಮಣ ಗೌಡ ಅವರು ಕೆವಿಜಿ ಅಕಾಡೆಮಿ ಆಫ್ ಲಿಬೆರಲ್‌ ಎಜುಕೇಷನ್‌ ಸಂಸ್ಥೆಯ ಸಂಸ್ಥಾಪಕರಾಗಿದ್ದಾರೆ. ವಯಸ್ಸಾದ ಮತ್ತು ಅನಾರೋಗ್ಯದ ಕಾರಣ ಶಿಕ್ಷಣಿಕ ಸಂಸ್ಥೆಗಳ ನಿರ್ವಹಣೆ ಹೊಣೆಯನ್ನು ಹಿರಿಯ ಪುತ್ರ ಕೆ.ವಿ. ಚಿದಾನಂದ ಮತ್ತು ಕಿರಿಯ ಪುತ್ರ ರೇಣುಕಾ ಪ್ರಸಾದ್‌ ಅವರಿಗೆ ವಿಭಜನೆ ಮಾಡಿ ಕೊಡಲಾಗಿತ್ತು.

ಆದರೆ, ಮತ್ತೋರ್ವ ಪುತ್ರ ಎ.ಎಸ್‌. ರಾಮಕೃಷ್ಣ ಅವರು ಕೆವಿಜಿ ಪಾಲಿಟೆಕ್ನಿಕ್‌ ಕಾಲೇಜು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಆಸ್ತಿ ಹೊಣೆಗಾರಿಕೆ ವಿಭಜನೆಯನ್ನು ರಾಮಕೃಷ್ಣ ಅವರ ಸಲಹೆ ಮೇರೆಗೆ ಮಾಡಲಾಗಿದೆ. 2009ರಲ್ಲಿ ಚಿದಾನಂದ ಅವರ ಪರ ಕೆವಿಜಿ ಮೆಡಿಕಲ್‌ ಕಾಲೇಜು ವ್ಯವಹಾರಗಳನ್ನು ರಾಮಕೃಷ್ಣ ಅವರು ನೋಡಿಕೊಳ್ಳುತ್ತಿದ್ದರು ಎಂದು ಭಾವಿಸಿದ್ದ ರೇಣುಕಾ ಪ್ರಸಾದ್‌, ರಾಮಕೃಷ್ಣ ಕೊಲೆಗೆ ಸುಪಾರಿ ನೀಡಿದ್ದರು.

2011ರ ಏಪ್ರಿಲ್‌ 28ರಂದು ಬೆಳಗ್ಗೆ 7.45ರ ವೇಳೆಯಲ್ಲಿ ಅಂಬೆತಡ್ಕ ಬಳಿಯ ಶ್ರೀಕೃಷ್ಣ ಆಯುರ್ವೇದಿಕ್‌ ಥೆರಪಿ ಕ್ಲಿನಿಕ್‌ ರಸ್ತೆಯಲ್ಲಿ ವಾಕಿಂಗ್‌ ಮಾಡುತ್ತಿದ್ದ ರಾಮಕೃಷ್ಣ ಅವರ ಮೇಲೆ ಆರೋಪಿಗಳು ದಾಳಿ ನಡೆಸಿ, ಕೊಚ್ಚಿ ಕೊಲೆ ಮಾಡಿದ್ದರು. ಪ್ರಕರಣ ಸಂಬಂಧ ಸುಳ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು

Leave a Reply

Your email address will not be published. Required fields are marked *

error: Content is protected !!