ವಿಟ್ಲ: ಪುಣಚ ಕಲ್ಪವೃಕ್ಷ ಫ್ರೆಂಡ್ಸ್ ವತಿಯಿಂದ ಅಂಬ್ಯುಲೆನ್ಸ್ ಸೇವೆ ಲೋಕಾರ್ಪಣೆ
ವಿಟ್ಲ: ಪುಣಚ ಕಲ್ಪವೃಕ್ಷ ಫ್ರೆಂಡ್ಸ್ ವತಿಯಿಂದ ನಡೆಯುವ ಅಂಬ್ಯುಲೆನ್ಸ್ ಸೇವೆ ಸೋಮವಾರ ಉದ್ಘಾಟನೆಗೊಂಡಿತು.
ಪುಣಚ ಗ್ರಾಮ ಪಂಚಾಯತ್ ಅಧ್ಯಕ್ಷೆ ಬೇಬಿ ಲೋಕಾರ್ಪಣೆ ಗೊಳಿಸಿದರು. ಸಮಾರಂಭದಲ್ಲಿ ಭಾಗವಹಿಸಿದ ಪರಿಯಾಲ್ತಡ್ಕ ಜುಮ್ಮಾ ಮಸೀದಿಯ ಧರ್ಮಗುರು ಅಬೂಬಕ್ಕರ್ ಸಿದ್ದೀಕ್ ರಜ್ವೀ ಮಾತನಾಡಿ ಜೀವ ತೆಗೆಯುವ ಕಾರ್ಯದ ಬದಲು ಜೀವ ಉಳಿಸುವ ಕಾರ್ಯಕ್ಕೆ ಮುಂದಾಗಿರುವುದಲ್ಲಿ ಶ್ರೇಷ್ಠತೆ ಇದೆ ಎಂದರು.
ಮನೇಲಾ ಕ್ರಿಸ್ತರಾಜ ದೇವಾಲಯದ ಧರ್ಮಗುರು ಫಾದರ್ ನೆಲ್ಸನ್ ಒಲಿವೆರಾ ಮಾತನಾಡಿ ಊರಿನಲ್ಲಿರುವ ಸಂಘಟನೆಗಳು ಮಾಡುವ ಕಾರ್ಯ ಹತ್ತೂರು ಜನರ ಮೈಮನಗಳನ್ನು ಮುಟ್ಟಬೇಕು. ಸದಾ ನೆನಪಿಸಿಕೊಳ್ಳುವಂತಿರಬೇಕು ಎಂದರು.
ಕಲ್ಪವೃಕ್ಷ ಫ್ರೆಂಡ್ಸ್ ನ ಮಾದರಿ ಯುವಕರ ಮಾನವೀಯತೆಯ ಕೆಲಸ ಗ್ರಾಮದ ಶಾಂತಿ, ಸೌಹಾರ್ದತೆ, ಅನ್ಯೋನ್ಯತೆಗೆ ಪೂರಕವಾಗಿದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ.ಎಸ್.ಮಹಮ್ಮದ್ ಹೇಳಿದರು.
ಪುಣಚ ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜನಾರ್ದನ ಭಟ್ ಅಮೈ ಮಾತನಾಡಿ ಯುವ ಸಂಘಟನೆ ಅತ್ಯುತ್ತಮ ಸೇವೆಗೆ ಮುಂದಾಗಿದೆ. ಈ ವ್ಯವಸ್ಥೆಯನ್ನು ಸಮರ್ಪಕವಾಗಿ ಕೊಂಡೊಯ್ಯುವುದು ಅತೀ ಮುಖ್ಯ ಎಂದರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಹೇಶ್ ಶೆಟ್ಟಿ ಬೈಲುಗುತ್ತು, ಗ್ರಾಮ ಪಂಚಾಯತ್ ಸದಸ್ಯ ಉದಯ ಕುಮಾರ್ ದಂಬೆ, ಪಂಚಾಯತ್ ಪಿಡಿಒ ರವಿ ಉಪಸ್ಥಿತರಿದ್ದರು.
ಪುಣಚ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಾಮಕೃಷ್ಣ ಮೂಡಂಬೈಲು ಕಾರ್ಯಕ್ರಮ ನಿರೂಪಿಸಿದರು. ಕಲ್ಪವೃಕ್ಷ ಫ್ರೆಂಡ್ಸ್ ನ ಸಂತೋಷ್, ಹರೀಶ್ ಪಿ., ಜಗದೀಶ್ ಚನಿಲ, ಪ್ರಕಾಶ್ ಮಲೆತ್ತಡ್ಕ, ಪವನ್ ಮಲ್ಲಿಕಟ್ಟೆ, ಮುರಳಿ ಪುಣಚ, ಲೋಕೇಶ್ ಅಜ್ಜಿನಡ್ಕ, ಲೋಕೇಶ್ ಕುಟ್ಟಿತ್ತಡ್ಕ ಸಹಕರಿಸಿದರು.