ಜಮೀನಿನಲ್ಲಿ ತಾಯಿ, ಮಕ್ಕಳಿಬ್ಬರ ಮೃತದೇಹ ನೇಣುಹಾಕಿದ ಸ್ಥಿತಿಯಲ್ಲಿ ಪತ್ತೆ
ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದ ಹೊರ ವಲಯದ ಜಮೀನಿನಲ್ಲಿ ತಾಯಿ, ಮಕ್ಕಳಿಬ್ಬರು ನೇಣುಹಾಕಿದ ಸ್ಥಿತಿಯಲ್ಲಿ ಮೃತಪಟ್ಟಿದ್ದಾರೆ. ಆತ್ಮಹತ್ಯೆ ಎಂದು ಹೇಳಲಾಗುತ್ತಿದೆ. ಆದರೆ, ಮೃತಪಟ್ಟ ಮಹಿಳೆಯ ಪೋಷಕರು ಕೊಲೆಯ ಆರೋಪ ಮಾಡಿದ್ದಾರೆ.
ಗುರುವಾರ ರಾತ್ರಿ ಘಟನೆ ನಡೆದಿದೆ. ಗ್ರಾಮದ ಮೇಘ (24), ಪುನ್ವಿತಾ (06), ಮನ್ವಿತಾ (03) ಮೃತಪಟ್ಟವರು. ಮೇಘ ಅವರ ಪತಿ ಅಭಿ ಅಲಿಯಾಸ್ ಧನಂಜಯ, ಅತ್ತೆ ನಿರ್ಮಲಮ್ಮ ಮತ್ತು ಮಾವ ಮಲ್ಲಿಕಾರ್ಜುನ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೈದುನ ಪುಟ್ಟು ಪರಾರಿಯಾಗಿದ್ದಾರೆ.
ಕೌಟುಂಬಿಕ ಕಲಹದಿಂದ ಮೇಘ ಅವರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ ಆತ್ಮಹತ್ಯೆಯೇ, ಕೊಲೆಯೇ ಎಂಬುದನ್ನು ಸ್ಪಷ್ಟಪಡಿಸಿಲ್ಲ.
ಮಾಧ್ಯಮಗಳೊಂದಿಗೆ ಮಾತನಾಡಿದ ಮೇಘ ತಂದೆ ಮಹೇಶ್ ಅವರು, ‘ಇದು ಆತ್ಮಹತ್ಯೆ ಅಲ್ಲ, ಕೊಲೆ. ಎಂಟು ವರ್ಷಗಳ ಹಿಂದೆ ಮದುವೆ ಮಾಡಿದ್ದೆವು. ಆರು ವರ್ಷಗಳಿಂದ ಮಗಳಿಗೆ ಅಳಿಯ, ಅವರ ತಂದೆ, ತಾಯಿ ಕಿರುಕುಳ ನೀಡುತ್ತಿದ್ದರು. ದುಡ್ಡು ತರುವಂತೆ ಒತ್ತಾಯ ಮಾಡುತ್ತಿದ್ದರು. ಗುರುವಾರ ಇಡೀ ದಿನ ಗಲಾಟೆಯಾಗಿದೆ. ರಾತ್ರಿ ಹೊಡೆದು ಕೊಲೆ ಮಾಡಿ, ನೇಣಿಗೆ ಹಾಕಿದ್ದಾರೆ. ಈಗ ಆತ್ಮಹತ್ಯೆ ಎಂದು ಬಿಂಬಿಸುತ್ತಿದ್ದಾರೆ’ ಎಂದು ಆರೋಪಿಸಿದರು.




