ಕನಿಷ್ಠ ಬೆಂಬಲ ಬೆಲೆ ಕುರಿತು ಚರ್ಚೆ ನಡೆಸದೆ ಪ್ರತಿಭಟನಾ ಸ್ಥಳವನ್ನು ಬಿಡುವುದಿಲ್ಲ: ರಾಕೇಶ್ ಟಿಕಾಯತ್
ದೆಹಲಿ: ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಸೇರಿದಂತೆ ತಮ್ಮ ಬೇಡಿಕೆಗಳ ಕುರಿತು ಚರ್ಚೆ ನಡೆಸದ ಹೊರತು ರೈತರು ಪ್ರತಿಭಟನಾ ಸ್ಥಳಗಳನ್ನು ತೊರೆಯುವುದಿಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಸೋಮವಾರ ಹೇಳಿದ್ದಾರೆ.
ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಒಪ್ಪಿಗೆ ನೀಡಿದ ನಂತರ ಇತರ ಬೇಡಿಕೆಗಳ ಬಗ್ಗೆ ಚರ್ಚಿಸಲಾಗುವುದು ಎಂದು ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮಸೂದೆಯನ್ನು ಚಳಿಗಾಲದ ಅಧಿವೇಶನದ ಮೊದಲ ದಿನವಾದ ಸೋಮವಾರ ಸಂಸತ್ತು ಅಂಗೀಕರಿಸಿತು.
ಮೂರು ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಸಾವನ್ನಪ್ಪಿದ ರೈತರ ಕುಟುಂಬಗಳಿಗೆ ಪರಿಹಾರ ಮತ್ತು ಪ್ರತಿಭಟನಾನಿರತ ರೈತರ ಮೇಲಿನ ಪ್ರಕರಣಗಳನ್ನು ರದ್ದುಗೊಳಿಸುವುದು ತಮ್ಮ ಬೇಡಿಕೆಗಳಲ್ಲಿ ಸೇರಿವೆ ಎಂದು ಟಿಕಾಯತ್ ಹೇಳಿದರು.
“ದೇಶದಲ್ಲಿ ಯಾವುದೇ ಪ್ರತಿಭಟನೆಗಳು ಇರಬಾರದು ಎಂದು ಸರ್ಕಾರವು ಬಯಸುತ್ತದೆ, ಆದರೆ ಇತರ ವಿಷಯಗಳು ಸೇರಿದಂತೆ ಎಂಎಸ್‌ಪಿ ಚರ್ಚೆಯ ಮೊದಲು ನಾವು ಪ್ರತಿಭಟನಾ ಸ್ಥಳವನ್ನು ಬಿಡುವುದಿಲ್ಲ” ಎಂದು ಬಿಕೆಯು ನಾಯಕ ಹೇಳಿದರು.
ಕೃಷಿ ಕಾನೂನುಗಳ ರದ್ದತಿ ಮಸೂದೆ, 2021 ರ ಅಂಗೀಕಾರವು “ಆಂದೋಲನದ ಸಮಯದಲ್ಲಿ ಪ್ರಾಣ ಕಳೆದುಕೊಂಡ 750 ರೈತರಿಗೆ ಗೌರವವಾಗಿದೆ” ಎಂದು ಅವರು ಹೇಳಿದರು.