ಕಲ್ಲಡ್ಕದಲ್ಲಿ ಹದಗೆಟ್ಟ ರಸ್ತೆ, ವಿಪರೀತ ಧೂಳಿನ ಸಮಸ್ಯೆ: ಗುತ್ತಿಗೆ ಕಂಪನಿಯ ವಾಹನಗಳನ್ನು ತಡೆಗಟ್ಟಿ ಆಕ್ರೋಶ
ಬಂಟ್ವಾಳ: ಕಲ್ಲಡ್ಕದಲ್ಲಿ ಹದಗೆಟ್ಟ ರಸ್ತೆ ಮತ್ತು ಧೂಳಿನಿಂದ ಸಮಸ್ಯೆಗಳು ಉಂಟಾಗಿದ್ದು, ಇದರಿಂದ ರೋಸಿಹೋದ ಕಲ್ಲಡ್ಕದ ವರ್ತಕರು, ಹಾಗೂ ಸಾರ್ವಜನಿಕರು ಗುರುವಾರ ಪಕ್ಷ, ಜಾತಿ, ಧರ್ಮ ಬೇಧ ಮರೆತು ಒಗ್ಗಟ್ಟಾಗಿ ಗುತ್ತಿಗೆ ಕಂಪನಿ ವಾಹನಗಳನ್ನು ತಡೆಗಟ್ಟಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಗುತ್ತಿಗೆ ಕಂಪನಿ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು, ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದ್ದು, ಮುಂದಿನ ಬುಧವಾರದೊಳಗೆ ಕೆಲಸ ಆರಂಭಿಸುವುದಾಗಿ ಭರವಸೆ ನೀಡಿದ ಬಳಿಕ ತಾತ್ಕಾಲಿಕವಾಗಿ ಅಂತ್ಯಗೊಂಡಿತು.
ಈ ಸಂದರ್ಭ ಮಾತನಾಡಿದ ಪ್ರತಿಭಟನಾಕಾರರು ಕಲ್ಲಡ್ಕದಲ್ಲಿ ರಸ್ತೆ ಸಂಪೂರ್ಣ ಹಾಳಾಗಿದ್ದು, ಹೊಂಡ ಮುಚ್ಚಿ, ರಸ್ತೆಯನ್ನು ಸದೃಢವಾಗಿಸುವ ಕೆಲಸ ಆರಂಭಿಸಬೇಕು, ಧೂಳಿನ ಸಮಸ್ಯೆ ತಲೆದೋರಿದ್ದು, ಇದಕ್ಕೆ ಮುಕ್ತಿ ನೀಡಬೇಕು, ಡ್ರೈನೇಜ್ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿದರು.
ಬುಧವಾರದೊಳಗೆ ಕಾಮಗಾರಿ ಆರಂಭಗೊಳ್ಳದೇ ಇದ್ದರೆ, ಕಲ್ಲಡ್ಕ ಪೇಟೆ ಬಂದ್, ಹೆದ್ದಾರಿ ತಡೆಯಂಥ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ.




