ಬಂಟ್ವಾಳ: ಲಕ್ಷಾಂತರ ಮೌಲ್ಯದ ಪಡಿತರ ಅಕ್ಕಿ ನಾಪತ್ತೆ: ಜಿಲ್ಲಾಧಿಕಾರಿಗಳಿಂದ ತನಿಖೆಗೆ ಆದೇಶ
ಬಂಟ್ವಾಳ: ತಾಲೂಕಿನ ಪಡಿತರ ಚೀಟಿದಾರರಿಗೆ ವಿತರಣೆಯಾಗಲು ಆಹಾರ ಇಲಾಖೆ ನೀಡಿದ ಅಕ್ಕಿ ದಾಸ್ತಾನಿನಿಂದ ಕೋಟಿಗೂ ಅಧಿಕ ಮೌಲ್ಯದ ಸಾವಿರಾರು ಕ್ವಿಂಟಾಲ್ ಅಕ್ಕಿ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಬಗ್ಗೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.
ಸುಮಾರು 1 ಕೋಟಿ 32 ಲಕ್ಷದ 36 ಸಾವಿರದ 30 ರೂ ಮೌಲ್ಯದ 3892 ಕ್ವಿಂಟಾಲ್ ಅಕ್ಕಿಯ ಕೊರತೆ ಕಂಡು ಬಂದಿದ್ದು, ಇಲ್ಲಿ ಅವ್ಯವಹಾರ ನಡೆದಿದೆ ಎಂದು ಕರ್ನಾಟಕ ಆಹಾರ ಮತ್ತು ಸರಬರಾಜು ನಿಗಮದ ಕಚೇರಿ ವ್ಯವಸ್ಥಾಪಕ ಶರತ್ ಕುಮಾರ್ ಹೊಂಡಾ ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬಂಟ್ಬಾಳ ತಾಲೂಕಿನ ಬಿ.ಸಿ.ರೋಡಿನ ಕೆಎಸ್‌ಆರ್‌ಟಿಸಿ ಡಿಪೋದ ಮುಂಭಾಗದಲ್ಲಿರುವ ಗೋದಾಮಿನಲ್ಲಿ ದಾಸ್ತಾನು ಇಡಲಾಗಿದ್ದ ಅಕ್ಕಿಯ ಲೆಕ್ಕಾಚಾರದಲ್ಲಿ ಕೊರತೆ ಕಂಡು ಬಂದ ಹಿನ್ನೆಲೆಯಲ್ಲಿ ತನಿಖೆಗಾಗಿ ಪೊಲೀಸ್ ಇಲಾಖೆಗೆ ದೂರು ನೀಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋದಾಮು ಮೇಲ್ವಿಚಾರಕ ವಿಜಯ್ ಎಂಬಾತನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ವಶಕ್ಕೆ ಪಡೆದಿದ್ದಾರೆ. ಉಳಿದಂತೆ ವಿಜಯ್ ನೀಡಿದ ಮಾಹಿತಿ ಆಧರಿಸಿ ಈ ಪ್ರಕರಣದಲ್ಲಿ ಶಾಮೀಲಾಗಿರುವ ಎಲ್ಲಾ ಆರೋಪಿಗಳನ್ನು ಬಂಧಿಸುವ ಬಗ್ಗೆ ಕಾರ್ಯಾಚರಣೆ ಮುಂದುವರಿಸಿದ್ದಾರೆ.”





