ಮಂಗಳೂರು: ಬಾಲಕಿ ಅಪಹರಣ ಪ್ರಕರಣ: ಆರೋಪಿಯ ಬಂಧನ
ಪಣಂಬೂರು: ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾಗಿದ್ದ ಅಪ್ರಾಪ್ತ ಬಾಲಕಿ ಅಪಹರಣ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಪಣಂಬೂರು ಪೊಲೀಸರು ಬಾಲಕಿ ಸಹಿತ ಆರೋಪಿಯನ್ನು ಬಂಧಿಸಿ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಂಧಿತನನ್ನು ಕಸ್ಬಾ ಬೆಂಗ್ರೆ ನಿವಾಸಿ ಮುಹಮ್ಮದ್ ಸರ್ಫರಾಝ್ ಯಾನೆ ಚಪ್ಪು (22) ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆಗಸ್ಟ್ 10ರಂದು ಆರೋಪಿಯು ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಪುಸಲಾಯಿಸಿ ಅಪಹರಣ ಮಾಡಿರುವುದಾಗಿ ಬಾಲಕಿಯ ಪೋಷಕರು ಪಣಂಬೂರು ಪೊಲೀಸರಿಗೆ ದೂರು ನೀಡಿದ್ದರು.
ಇನ್ನು ದೂರು ದಾಖಲಾಗುತ್ತಿದ್ದಂತೆ ಕಾರ್ಯಾಚರಣೆಗೆ ನಡೆಸಿದ ಪಣಂಬೂರು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸೋಮಶೇಖರ್ ಜೆ.ಪಿ. ಅವರ ನೇತೃತ್ವದ ಪೊಲೀಸ್ ತಂಡ ಕೆಲವೇ ಗಂಟೆಗಳ ಕಾರ್ಯಾಚರಣೆ ನಡೆಸಿ ಅಪಹರಣಕ್ಕೊಳಗಾಗಿದ್ದ ಬಾಲಕಿ ಸಹಿತ ಆರೋಪಿ ಮುಹಮ್ಮದ್ ಸರ್ಫರಾಝ್ ನನ್ನು ಬಂಧಿಸಿದ್ದಾರೆ.





