ತಲಪಾಡಿ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಚುನಾವಣೆಯಲ್ಲಿ ಎಸ್ ಡಿ ಪಿ ಐ ಗೆ ಬೆಂಬಲ:
ಇಬ್ಬರು ಬಿಜೆಪಿ ಕಾರ್ಯಕರ್ತರ ಪಕ್ಷದಿಂದ ಉಚ್ಛಾಟನೆ
ಉಳ್ಳಾಲ: ತಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿ ಎಸ್ಡಿಪಿಐ ಗೆಲುವಿಗೆ ಕಾರಣರಾದ ಇಬ್ಬರು ಬಿಜೆಪಿ ಬೆಂಬಲಿತ ಸದಸ್ಯರನ್ನು ಜಿಲ್ಲಾಧ್ಯಕ್ಷರ ಸೂಚನೆ ಮೇರೆಗೆ ಆರು ವರ್ಷಗಳ ಕಾಲ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಲಾಗಿದೆ.
ತಲಪಾಡಿ ಗ್ರಾಮ ಪಂಚಾಯತ್ ನಲ್ಲಿ ಬಿಜೆಪಿಗೆ ಬಹುಮತ ಇದ್ದ ಕಾರಣ ಸತ್ಯರಾಜ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ನಿಲ್ಲಿಸಲಾಗಿತ್ತು. ಆದರೆ ಬಿಜೆಪಿ ಬೆಂಬಲಿತ ಸದಸ್ಯರಾದ ಮಹಮ್ಮದ್ ಫಯಾಝ್ ಮತ್ತು ಮಹಮ್ಮದ್ ಅವರು ಎಸ್ ಡಿಪಿಐ ನಾಯಕರ ಆಸೆ, ಆಮಿಷ, ಒತ್ತಡದಿಂದ ಅಡ್ಡ ಮತದಾನ ಮಾಡಿ ಎಸ್ ಡಿಪಿಐ ಗೆಲುವಿಗೆ ಕಾರಣರಾಗಿದ್ದು ತಪ್ಪೊಪ್ಪಿಕೊಂಡಿದ್ದಾರೆ. ಆದರೂ ಅವರು ಪಕ್ಷಕ್ಕೆ ದ್ರೋಹ ಬಗೆದ ಕಾರಣ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಜೆಪಿ ಮಂಡಲಾಧ್ಯಕ್ಷ ಚಂದ್ರಹಾಸ ಪಂಡಿತೌಸ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬಿಜೆಪಿ ಅಧಿಕಾರಕ್ಕಾಗಿ ಇರುವ ಪಕ್ಷವಲ್ಲ, ಎಸ್ ಡಿಪಿಐಗೆ ಬೆಂಬಲ ನೀಡುವ ಅಗತ್ಯವೂ ಇಲ್ಲ. ಗ್ರಾಮ ಪಂಚಾಯತ್ ನಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಬಿ ಮೀಸಲಾತಿ ಬಂದಿದ್ದು ಬಿಜೆಪಿಯಲ್ಲಿ ಪುಷ್ಪಲತಾ ಶೆಟ್ಟಿ ಮಾತ್ರ ಇದ್ದ ಕಾರಣ ಅವಿರೋಧವಾಗಿ ಉಪಾಧ್ಯಕ್ಷರಾಗಿದ್ದಾರೆ. ಎಸ್ ಡಿಪಿಐಗೆ ಬೆಂಬಲ, ಸಹಕಾರ ನೀಡಿಲ್ಲ, ಈ ಬಗ್ಗೆ ತಪ್ಪು ಸಂದೇಶ ಹೋಗಿದ್ದು ಕಾರ್ಯಕರ್ತರು ಗೊಂದಲಕ್ಕೀಡಾಗಬಾರದು ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಂತೋಷ್ ಕುಮಾರ್ ರೈ, ಕಾರ್ಯದರ್ಶಿಗಳಾದ ಸತೀಶ್ ಕುಂಪಲ, ಜಯಶ್ರೀ ಕರ್ಕೇರ, ಮುಖಂಡರಾದ ಕಸ್ತೂರಿ ಪಂಜ, ರಣದೀಪ್ ಕಾಂಚನ್, ನವೀನ್ ಪಾದಲ್ಪಾಡಿ, ಜಿತೇಂದ್ರ ಶೆಟ್ಟಿ ತಲಪಾಡಿಗುತ್ತು, ಪುಷ್ಪಲತಾ ಶೆಟ್ಟಿ, ಹೇಮಂತ್ ಶೆಟ್ಟಿ ದೇರಳಕಟ್ಟೆ ಸುದ್ದಿಗೋಷ್ಠಿಯಲ್ಲಿದ್ದರು.





