ಮಂಗಳೂರಿನ ಪಾಸ್ ಪೋರ್ಟ್ ಆಫೀಸಿನ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶದ ಪತ್ರ ವೈರಲ್
ಮಂಗಳೂರು: ಮಂಗಳೂರು ಪಾಸ್ ಪಾಸ್ ಪೋರ್ಟ್ ಕಚೇರಿಯಲ್ಲಿ ಗ್ರಾಹಕರಿಗೆ ಅನಗತ್ಯ ಕಿರುಕುಳ ನೀಡುತ್ತಿರುವ ಬಗ್ಗೆ ಹಲವಾರು ದೂರುಗಳು ಬರುತ್ತಿವೆ. ಪಾಸ್ ಪೋರ್ಟ್ ಮಾಡಿಸಲು ಒಂದು ವ್ಯಕ್ತಿಗೆ ಆಧಾರ್ ಕಾರ್ಡ್, ಪಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಬ್ಯಾಂಕ್ ಪಾಸ್ ಬುಕ್ ಹೀಗೆ ನಮೂದಿಸಿರುವ ಹಲವು ದಾಖಲೆಗಳ ಪೈಕಿ ಎರಡು ದಾಖಲೆ ಹಾಜರು ಪಡಿಸಿದರೆ ಸಾಕು ಎಂದು ನಮೂದಿಸಿದ್ದರೂ ಇನ್ನೂ ಹೆಚ್ಚು ದಾಖಲೆ ತರುವಂತೆ ಒತ್ತಾಯಿಸಲಾಗುತ್ತಿದೆ. ತರದಿದ್ದಲ್ಲಿ ಅರ್ಜಿ ತಿರಸ್ಕರಿಸಿ ವಾಪಾಸ್ಸು ಕಳುಹಿಸುತ್ತಿದ್ದಾರೆ ಎನ್ನುವ ಹಲವು ದೂರುಗಳು ಬಂದಿವೆ.
ಇನ್ನು 50 ವರ್ಷ ಮೇಲ್ಪಟ್ಟ ವರಿಗೆ ಒಂದೇ ದಾಖಲೆ ಸಾಕು ಎಂದು ಕೇಂದ್ರ ಸರ್ಕಾರ ಕಾನೂನು ತಂದರೆ ಮಂಗಳೂರಿನ ಪಾಸ್ ಪೋರ್ಟ್ ಆಫೀಸಿನಲ್ಲಿ ಅದನ್ನು ಕಸದ ಬುಟ್ಟಿಗೆ ಎಸೆದಿದ್ದಾರೆ. 70 ವರ್ಷ ವಯಸ್ಸಾದ ವರಲ್ಲಿ ಎಲ್ಲಾ ದಾಖಲೆ ಇದ್ದರೂ ಜನನ ಸರ್ಟಿಫಿಕೇಟ್ ಎಲ್ಲಿದೆ ಆರು ತಿಂಗಳ ಹಿಂದಿನ ಬ್ಯಾಂಕ್ ಅಕೌಂಟ್ ಎಲ್ಲಿದೆ ಎಲ್ಲಾ ಮಾಡ್ಕೊಂಡು ಬನ್ನಿ ಎಂದು ಆ ವಯಸ್ಸಾದವರನ್ನೂ ಸತಾಯಿಸಲಾಗುತ್ತಿದೆ.
ಇನ್ನು ಗಂಡ ಹೊರ ದೇಶದಲ್ಲಿದ್ದರೆ ಚಿಕ್ಕ ಮಕ್ಕಳಿಗೆ ಪಾಸ್ ಪೋರ್ಟ್ ಮಾಡಲು ಹೋದರೆ ಆತ ಪಾಸ್ ಪೋರ್ಟ್ ಕಾಪಿಗೆ, ಆನೆಕ್ಷರ್ ಡಿ ಫಾರ್ಮಿಗೆ ಸಹಿ ಹಾಕಿ ಹೋಗಿದ್ದರೂ ಅದನ್ನು ಪುರಸ್ಕರಿಸದೇ ಆತ ಸಹಿ ಹಾಕಿ ಗಲ್ಫ್ ನಿಂದಲೇ ಮನೆಗೆ ಕೊರಿಯರ್ ಮಾಡಬೇಕು ಮತ್ತು ಆ ಕೊರಿಯರ್ ಕವರನ್ನು ಪಾಸ್ ಪೋರ್ಟ್ ಕಚೇರಿಗೆ ತರಬೇಕು ಎಂಬ ವಿಚಿತ್ರ ಕಾನೂನು ಮಂಗಳೂರು ಪಾಸ್ ಪೋರ್ಟ್ ಕಚೇರಿಯಲ್ಲಿ ಚಾಲ್ತಿಗೆ ತರಲಾಗಿದೆ.
ಮಂಗಳೂರಿನ ಪಾಸ್ಪೋರ್ಟ್ ಆಫೀಸಿನ ಪ್ರತಿಯೊಂದು ಕೌಂಟರಿನಲ್ಲೂ ಕೇರಳದರೇ ತುಂಬಿದ್ದು ಕನ್ನಡ ಮಾತ್ರ ಮಾತನಾಡುವವರು ಇವರ ಜೊತೆ ವ್ಯವಹರಿಸಲು ಕಷ್ಟ ಪಡಬೇಕಿದೆ. ಗ್ರಾಹಕರನ್ನು ಸತಾಯಿಸುವ ಈ ಪಾಸ್ ಪೋರ್ಟ್ ಅಧಿಕಾರಿಗಳ ಉದ್ದೇಶದ ಬಗ್ಗೆ ಸಂಶಯಗಳಿದ್ದು ಕೇಂದ್ರ ಸರ್ಕಾರ ಪಾಸ್ ಪೋರ್ಟ್ ಕಚೇರಿಗಳು ಗ್ರಾಹಕ ಸ್ನೇಹಿಯಾಗಿ ಸುಲಭವಾಗಿ ಎಲ್ಲರಿಗೂ ಪಾಸ್ ಪೋರ್ಟ್ ಸಿಗುವಂತಾಗಬೇಕು ಎಂದು ಜಾಹಿರಾತು ಮೂಲಕ ಪ್ರಚಾರ ಮಾಡುತ್ತಿದ್ದರೆ ಮಂಗಳೂರಿನ ಪಾಸ್ ಪೋರ್ಟ್ ಕಚೇರಿ ಮಾತ್ರ ಇದಕ್ಕೆ ವ್ಯತಿರಿಕ್ತವಾಗಿ ಗ್ರಾಹಕರಿಗೆ ತೊಂದರೆ ಕೊಡುವುದರಲ್ಲಿ ನಿರತವಾಗಿದೆ.
ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳು ಕೂಡಲೇ ಈ ಬಗ್ಗೆ ಗಮನ ಹರಿಸಿ ಮಂಗಳೂರು ಪಾಸ್ ಪೋರ್ಟ್ ಕಚೇರಿಯಲ್ಲಿ ಕೇರಳ ಮೂಲದ ಅಧಿಕಾರಿಗಳು ಗ್ರಾಹಕರಿಗೆ ನೀಡುತ್ತಿರುವ ಅನಗತ್ಯ ಕಿರುಕುಳ ನಿಲ್ಲಿಸಲು ಮುಂದಾಗಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.





