ವಿದ್ಯುತ್ ಕಂಬಕ್ಕೆ ಢಿಕ್ಕಿಯಾದ ಕಾರು: ವಿದ್ಯುತ್ ತಗಲಿ ಇಬ್ಬರು ಮೃತ್ಯು
ಮೈಸೂರು: ಕಾಂಪೌಂಡ್ ಹಾಗೂ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರನ್ನು ಹೊರತರಲು ಯತ್ನಿಸಿದ ಇಬ್ಬರು ಯುವಕರು ವಿದ್ಯುತ್ ಸಂಪರ್ಕ ಸಾಧಿಸಿ ದಾರುಣವಾಗಿ ಮೃತಪಟ್ಟ ಘಟನೆ ಮೈಸೂರಿನ ಮಾನಂದವಾಡಿ ರಸ್ತೆಯಲ್ಲಿ ನಡೆದಿದೆ. ಯುವಕರ ಸಹಾಯಕ್ಕೆ ಬಂದ ಮೂವರು ಗಾಯಗೊಂಡಿದ್ದಾರೆ.
ಅಶೋಕಾ ಪುರಂ ನಿವಾಸಿಗಳಾದ ಕಿರಣ್ ಹಾಗೂ ರವಿಕುಮಾರ್ ಮೃತ ದುರ್ದೈವಿಗಳು. ಇವರ ನೆರವಿಗೆ ಬಂದ ರವಿ, ಸಂದೇಶ್, ಶಿವಕುಮಾರ್ ವಿದ್ಯುತ್ ಶಾಕ್ ನಿಂದ ಗಾಯಗೊಂಡು ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ
ಗುರುವಾರ ತಡರಾತ್ರಿ ಘಟನೆ ನಡೆದಿದೆ. ಸಂಸದ ಶ್ರೀನಿವಾಸ್ ಪ್ರಸಾದ್ ರವರ ಸಂಬಂಧಿಕರಿಗೆ ಸೇರಿದ ಇನೋವಾ ಕಾರನ್ನು ಟ್ರಯಲ್ ನೋಡುವುದಾಗಿ ರವಿಕುಮಾರ್ ಪಡೆದಿದ್ದಾರೆ.
ಮಾನಂದವಾಡಿ ರಸ್ತೆಯಲ್ಲಿ ರವಿಕುಮಾರ್, ಭಾಸ್ಕರ್, ರವಿ, ಸಂದೇಶ್ ಹಾಗೂ ಶಿವಕುಮಾರ್ ಆಶೋಕಾಪುರಂ ನತ್ತ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಕಾರು ಕಾಂಪೌಂಡ್ ಗೆ ಢಿಕ್ಕಿ ಹೊಡೆದು ನಂತರ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ.





