September 20, 2024

ಆಟಿ ತುಳುವರಿಗೆ ಜ್ಞಾನ ಕೊಡುವ ಶುಭ ತಿಂಗಳು

0

ವಿಶೇಷ ಲೇಖನ: ರಾಧಾಕೃಷ್ಣ ಎರುಂಬು

ಋತುಚಕ್ರ ತಿರುಗುವುದು, ಕಾಲನೆದೆ ಮರುಗುವುದು| ಮೃತನ ಮಣ್ಣಿಂದ ಹೊಸಹುಲ್ಲು ಮೊಳೆಯುವುದು || ಕ್ಷಿತಿ ಗರ್ಭಧರಿಸುವಳು ಮತ್ತುದಿಸುವುದು ಜೀವ|
ಸತತ ಕೃಷಿಯೋ ಪ್ರಕೃತಿ ಮಂಕುತಿಮ್ಮ ||

“ಋತುಗಳು ಬದಲಾಗುತ್ತಾ ಹೋಗುತ್ತದೆ. ಕಾಲನ ಎದೆಯು ಮರುಗುತ್ತದೆ. ಜನರು ಮರಣ ಹೊಂದುತ್ತಾರೆ.ಆ ಮಣ್ಣಿನಿಂದ ಮತ್ತೆ ಹೊಸ ಹುಲ್ಲು ಮೊಳೆಯುತ್ತದೆ. ಭೂಮಿಯಲ್ಲಿ ಜೀವಾಂಕುರವಾಗುತ್ತದೆ.ಪ್ರಕೃತಿಯು ನಿರಂತರವಾಗಿ ಕೃಷಿಯನ್ನು ಮಾಡುತ್ತಿರುತ್ತಾಳೆ, ಎಂಬುವುದು ಕವಿವಾಣಿ.

ಕಾಲಚಕ್ರದೋಪಾದಿಯಲ್ಲಿ ಕೃಷಿ ಸರಿದಾಗ ಹಲವು ಆಚರಣೆಗಳು ಪ್ರಕೃತಿದತ್ತ ಸಂಪ್ರದಾಯಗಳು ಬದಿ ಸರಿದವು. ಕರಾವಳಿಯ ನೆಲವಂತೂ ದೇವಭೂಮಿ ಎಂದೇ ಉಲ್ಲೇಖಿತ. ದೈವ ದೇವರುಗಳಿಗೆ ಸೌರಮಾನ ಪದ್ಧತಿಯಂತೆ ತುಳು ತಿಂಗಳು ವಿಷುಸಂಕ್ರಮಣ ದಿಂದ ಆರಂಭಿಸಿ ಅಮಾವಾಸ್ಯೆ, ಪೌರ್ಣಮಿಗಳು ತಿಂಗಳ ಆವೃತ್ತಿಯಂತೆ ತಿಂಗಳ ಪರ್ವಗಳು, ಆಯನ, ಕೂಟ, ನೇಮೋತ್ಸವಗಳು ಜರಗುತ್ತವೆ. ತುಳು ಅಭಿಮಾನಿಗಳು ಮಾತ್ರವಲ್ಲದೆ ಕರಾವಳಿಯಲ್ಲಿ ಶುಭಕಾರ್ಯಗಳ ಸರ್ವವೂ ತುಳು ತಿಂಗಳ ಆಚರಣೆಯಂತೆಯೇ ಆರಾಧಿಸಲ್ಪಡುತ್ತದೆ. ಕರ್ನಾಟಕದ ಉತ್ತರಭಾಗದಲ್ಲಿ ಚಂದ್ರಮಾನ ಪದ್ಧತಿಯಂತೆ ಆಷಾಡವಿದ್ದರೆ, ದಕ್ಷಿಣಭಾಗಕ್ಕೆ ‘ಆಟಿ’ ಎಂಬ ತುಳು ತಿಂಗಳು 15 ದಿನದ ನಂತರ ಆರಂಭವಾಗುತ್ತದೆ. ಇಂಗ್ಲೀಷ್ ತಿಂಗಳ ಎಪ್ರೀಲ್-ಮೇ ಯ ನಡುವೆ ತುಳು ತಿಂಗಳು ‘ಪಗ್ಗು’ ಆರಂಭಗೊಳ್ಳುತ್ತದೆ. ಇದೀಗ ಜುಲೈ -ಆಗಸ್ಟ್ ನಡುವಿನ ಕರ್ಕಟಕ ಸಂಕ್ರಮಣ ತುಳು ತಿಂಗಳು ‘ಆಟಿಯ’ ಆರಂಭದ ದಿನ. ಇಂದು ಈ ತಿಂಗಳನ್ನು ಸಂಪ್ರದಾಯದಂತೆ ಅಶುಭ ತಿಂಗಳೆOದೆ ಗುನುಗುನಿಸುತ್ತಾರೆ. ಪೂಜಾ ಕಾರ್ಯಗಳಿಲ್ಲ, ತೀರ್ಥಯಾತ್ರೆಗಳು ಸಲ್ಲ, ಹೊಸ ಸಂಬಂದಗಳ ಮಾತುಕತೆಗಳಿಲ್ಲ, ಹೊಸ ವಸ್ತುಗಳ ಖರೀದಿಗಳಿಗೂ ಈ ತಿಂಗಳು ಮುರಿಸು ತರುತಿದೆ. ಸ್ವಲ್ಪ ಕೂಲಂಕುಷವಾಗಿ ವಿಮರ್ಶೆ ಮಾಡಿದರೆ ತಿಳಿಯುತ್ತದೆ ಆ ಕಾಲಕ್ಕೆ ‘ಆಟಿ’ ಎಂಬ ಈ ತುಳು ತಿಂಗಳ ದಿನಗಳು ಸಂಕಷ್ಟದಿಂದ ಕೂಡಿರುವುದಾಗಿದೆ. ತಿನ್ನುವುದಕ್ಕೆ ಶೇಖರಿಸಿಟ್ಟ ತಿನಿಸುಗಳು, ವಿಪರೀತ ಮಳೆ ತಪ್ಪಿದರೆ ವಿಪರೀತ ಬಿಸಿಲು, ಕೆಲಸ ಕಡಿಮೆ, ಮಾಡಿಸುವವರೂ ವಿರಳ ಹೀಗೆ. ಮನೆಯಲ್ಲೇ ಇದ್ದು ದಿನ ಕಳೆಯಬೇಕಾದ ಅನಿವಾರ್ಯತೆ. ಅದಕ್ಕೆ ಹಿರಿಯರು ಹೇಳುತ್ತಿದ್ದರು ಆಟಿ ತಿಂಗಳು ನಿಧಾನವಾಗಿ ಸಾಗುತ್ತದೆ ಎಂದು. ಹವಾಮಾನ ವೈಪರೀತ್ಯ ನೈಸರ್ಗಿಕತೆಯಲ್ಲಿ ಕ್ರಿಮಿಕೀಟ ಸೃಷ್ಟಿ ಗೆ ಕಾರಣವಾದರೆ, ದೈಹಿಕವಾಗಿ ಜ್ವರ, ಶೀತ, ಚರ್ಮರೋಗಾದಿಗಳ ತೊಂದರೆಗೆ ಕಾರಣವಾಗುತ್ತದೆ. ಅದಕ್ಕಾಗಿಯೇ ನಮ್ಮ ಹಿಂದಿನ ತಲೆಮಾರಿನವರು ವಿಶೇಷ ಕಷಾಯವನ್ನೂ ಕಂಡುಕೊಂಡಿದ್ದರು ಎಂಬುದೂ ಆಶ್ಚರ್ಯ ತರುವಂತದ್ದು. ಆಟಿ ಅಮಾವಾಸ್ಯೆಯ ದಿನ ಹಾಲೆಮರದ ತೊಗಟೆಯನ್ನು ಕಲ್ಲಿನಿಂದ ಜಜ್ಜಿ ರಸ ತೆಗೆದು ಕಲ್ಲಿನ ಮೂಲಕ ಬಿಸಿ ಶಾಖವನ್ನಿತ್ತು, ಜೀರಿಗೆ,ಮೆಂತೆ ಸೇರಿಸಿ ಕುಡಿದು ದೇಹವನ್ನು ರೋಗ ರುಜಿನಗಳಿಂದ ಕಾಪಾಡಿಕೊಳ್ಳುತ್ತಿದ್ದರು. ಉಷ್ಣಶರೀರಕ್ಕೆ ತಂಪಾಗಿಸಲು ಮೆಂತೆಯ ಗಂಜಿ ಉಣಬಡಿಸುತಿದ್ದರು.ಅದೇ ದಿನ ಕೆಲವೊಂದು ತೀರ್ಥಬಾವಿ, ಸಮುದ್ರ ಸ್ನಾನ ರೋಗ ರುಜಿನಗಳ ನಿರ್ಮೂಲನೆಗೆ ಕಾರಣವಾಗಿತ್ತು. ಸ್ವಾಭಾವಿಕ ಪರಿಸರದಿಂದ ದೊರಕುವ ತಜಂಕು, ಕಣಿಲೆ, ಮರಗೆಣಸು, ಹಲಸಿನ ಸೊಳೆ, ಮೊದಲಾದುವುಗಳ ಖಾದ್ಯ, ನೀರು ಯಾ ಭೂ ಬೇಟೆಯಿಂದ ದೊರಕುವ ಪ್ರಾಣಿಗಳು ಮೃಷ್ಟಾನ್ನವಾಗುತ್ತಿದ್ದವು. ಆಟಿಯ ಬಿಡುವಿಗೆ ಚೆನ್ನೆಮಣೆ ಮೊದಲಾದ ಒಳಾoಗಣ ಆಟ ಮುದ ನೀಡುತಿದ್ದವು.ಕೆಲಸ ಕಡಿಮೆಯಿದ್ದ ಸೊಸೆಯಂದಿರು ತವರು ಮನೆಗೆ ತೆರಳುವ ಕ್ರಮ ಸಂಪ್ರದಾಯ ಮಾತ್ರವಾಗಿರದೆ ವೈಜ್ಞಾನಿಕವಾಗಿ ಸಂತಾನ ಪ್ರಾಪ್ತಿಗೆ ಯೋಗ್ಯವಲ್ಲದ ದಿನವೆಂದೂ ಕಾಳಜಿ ವಹಿಸುತಿದ್ದುದು ಹಿರಿಯರ ದೂರದೃಷ್ಠಿಗೆ ಸಾಕ್ಷಿ ಯಂತೆನಿಸಿದೆ.ಸೃಷ್ಟಿಕರ್ತ ಬ್ರಹ್ಮ ಮತ್ತು ಈಶ್ವರ ದೇವರುಗಳಿಂದ ಕಳಿಸಲ್ಪಟ್ಟ ಆಟಿ ಕಲೆಂಜ ಸಾಂಸ್ಕೃತಿಕ ಮತ್ತು ದೈವಿಕ ದೃಷ್ಟಿ ಸಾರುತ್ತಾ ಮನೆ ಮನೆಯ ಸರ್ವ ನಿಕೃಷ್ಟ ದೋಷ (ಮಾರಿ)ನೀವಾಳಿಸುತ್ತ ಪಡುವಣ ಕಡಲಿಗೆ ಎಸೆಯುತ್ತಾನೆಂಬ ನಂಬಿಕೆಗೆ ಪುಷ್ಟಿ ಕೊಡುತ್ತದೆ.ಅದು ಇಂದು ಪ್ರಸ್ತುತ ಜಾನಪದ ನೃತ್ಯ ಪ್ರಕಾರಕ್ಕೆ ಸೇರಿಕೊಂಡಿದೆ. ಅಶುಭ ತಿಂಗಳೆಂಬ ನಂಬಿಕೆ ದೈವ ದೇವರ ಆರಾಧನೆಗೆ ನಿಷಿದ್ದವಾಗಿದ್ದರೂ ತರವಾಡು ಮನೆಗಳಲ್ಲಿ ಕಲ್ಲುರ್ಟಿ ದೈವದ ಆಟಿ ಆಗೇಲು ಸೇವೆ ಹಾಗೂ ಭೂತಗಳೆಂದು ಕರೆಯಲ್ಪಡುವ ಕಾಯ ಬಿಟ್ಟ ಆತ್ಮಗಳಿಗೆ ಮತ್ತು ಅಕಾಲಿಕ ಮರಣ ಹೊಂದಿದ ಆತ್ಮಗಳಿಗೆ ತೃಪ್ತಿಪಡಿಸಲು ಹೊತ್ತಿನ ಊಟ ಬಡಿಸುವ ಕ್ರಮವಿದೆ. ಅದೇ ಆಟಿ ಬಡಿಸುವ ಕ್ರಮ. ಪ್ರಸ್ತುತ ವರ್ಷದಲ್ಲಿ ವಿವಾಹವಾದ ವಧು – ವರರಿಗೆ ಆಟಿ ತಮ್ಮನ ಎನ್ನುವ ಔತಣವೂ ಇದೆ. ಹೀಗೆ ತುಳು ತಿಂಗಳಲ್ಲೇ ವಿಶೇಷತೆ ಕಂಡ ಈ ಆಟಿ ತಿಂಗಳು ಅಶುಭವೆನ್ನುವುದಕ್ಕಿಂತಲೂ ಸಂದೇಶಗಳನ್ನು ಸಂಚಯಗೊಳಿಸುವ ಮಹತ್ತರ ತಿಂಗಳಾಗಿದೆ. ಪ್ರಸ್ತುತ ಜನಾಂಗ ಆಚರಿಸುವಂತೆ ಆಟಿ ಸಂಭ್ರಮದ ತಿಂಗಳಲ್ಲ ಆಹಾರಕ್ಕಾಗಿ ಸಂಗ್ರಾಮವಿರುವ ಕೂಟವಿರದ ತಿಂಗಳು. ತುಳು ನಾಡಿಗೆ ಜ್ಞಾನನೀಡುವ ಶುಭ ತಿಂಗಳು.

Leave a Reply

Your email address will not be published. Required fields are marked *

error: Content is protected !!