ಮಡಿಕೇರಿ | ದೇವಾಲಯದ ವ್ಯಾಪ್ತಿಯ ಬಳಿ ಗಾಂಜಾ ಮಾರಾಟ: ಇಬ್ಬರು ಆರೋಪಿಗಳ ಬಂಧನ
ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅಮ್ಮತ್ತಿಯ ಶ್ರೀ ಮುತ್ತಪ್ಪ ದೇವಾಲಯ ವ್ಯಾಪ್ತಿಯ ಬಸ್ ನಿಲ್ದಾಣದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಮ್ಮತ್ತಿ ನಿವಾಸಿ ಎನ್.ಎ.ಪೊನ್ನಣ್ಣ (46) ಹಾಗೂ ವಿರಾಜಪೇಟೆ ಸುಂಕದಕಟ್ಟೆ ನಿವಾಸಿ ಹೆಚ್.ಆರ್.ಲೋಹಿತ್ (26) ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿಗಳಿಂದ 104 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ. ವಿರಾಜಪೇಟೆ ಉಪ ವಿಭಾಗದ ಡಿವೈಎಸ್ಪಿ ಆರ್.ಮೊಹನ್ ಕುಮಾರ್, ಸಿಪಿಐ ಬಿ.ಎಸ್.ಶಿವರುದ್ರಪ್ಪ, ಪಿಎಸ್ಐ ಮಂಜುನಾಥ.ಸಿ.ಸಿ ಹಾಗೂ ಸಿಬ್ಬಂದಿಗಳ ವಿಶೇಷ ತಂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು.
ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವನ್ನು ಶ್ಲಾಘಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಮಾದಕ ವಸ್ತು ಮಾರಾಟದ ಕುರಿತು ಸಾರ್ವಜನಿಕರು ಮಾಹಿತಿ ನೀಡಿ ಸಹಕರಿಸುವಂತೆ ಮನವಿ ಮಾಡಿದ್ದಾರೆ.




