ಪಡಿತರ ಚೀಟಿಯ ಇ-ಕೆವೈಸಿ: ನ.10ರವರೆಗೆ ವಿಸ್ತರಣೆ
ಬೆಂಗಳೂರು: ಪಡಿತರ ಚೀಟಿ ಫಲಾನುಭವಿಗಳು ಇ-ಕೆವೈಸಿ ದೃಢೀಕರಿಸಲು ಅಕ್ಟೋಬರ್ 20ಕ್ಕೆ ಇದ್ದ ಗಡುವನ್ನು ನವೆಂಬರ್ 10ರವರೆಗೆ ವಿಸ್ತರಿಸಿ ಇಲಾಖೆ ಆದೇಶ ಹೊರಡಿಸಿದೆ.
ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಒಂದು ವರ್ಷಕ್ಕೂ ಮೇಲ್ಪಟ್ಟು ಇ-ಕೆವೈಸಿ ಮಾಡಿಸಿದ 1,15,87,298 ಫಲಾನುಭವಿಗಳು ಮತ್ತೊಮ್ಮೆ ಇ-ಕೆವೈಸಿ ಮಾಡಬೇಕೆಂದು ಈ ಹಿಂದೆ ಆದೇಶಿಸಲಾಗಿತ್ತು. ಇದೀಗ ಇ-ಕೆವೈಸಿ ದೃಢೀಕರಿಸಲು ಇದ್ದ ಕೊನೆಯ ದಿನಾಂಕವನ್ನು ನವೆಂಬರ್ 10ರ ವರೆಗೆ ವಿಸ್ತರಿಸಲಾಗಿದೆ.
ರಾಜ್ಯದಲ್ಲಿ ಒಂದು ವರ್ಷದ ಹಿಂದೆ ಇ-ಕೆವೈಸಿ ಮಾಡಿಸಿದ ಫಲಾನುಭವಿಗಳ ಜೊತೆಗೆ, ಇದುವರೆಗೆ ಒಂದು ಬಾರಿಯೂ ಇ-ಕೆವೈಸಿ ಮಾಡಿಸದ 3,82,362 ಹಾಗೂ ಐದು ವರ್ಷ ಮೇಲ್ಪಟ್ಟು ಇ-ಕೆವೈಸಿ ಮಾಡಿಸಿದ 54,27,396 ಫಲಾನುಭವಿಗಳು ಇನ್ನೂ ಇ-ಕೆವೈಸಿ ದೃಢೀಕರಿಸಬೇಕಿದೆ. ಫಲಾನುಭವಿಗಳು ‘ಅನ್ನ ಸೇವೆ’ ಮೊಬೈಲ್ ಅಪ್ಲಿಕೇಶನ್ ಮೂಲಕ ಖುದ್ದಾಗಿ ಅಥವಾ ನ್ಯಾಯಬೆಲೆ ಅಂಗಡಿಗಳಲ್ಲಿ ʻAHARAʼ ತಂತ್ರಾಂಶದ ಮೂಲಕ ಇ-ಕೆವೈಸಿ ಮಾಡಿಸಬಹುದಾಗಿದೆ. ಇಲ್ಲವಾದಲ್ಲಿ ನಿಯಮಾನುಸಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಹೇಳಿದೆ.
ಹೊರ ರಾಜ್ಯಗಳಿಗೆ ಕೆಲಸಕ್ಕೆಂದು ಹೋಗಿರುವ ರಾಜ್ಯದ ಪಡಿತರ ಚೀಟಿದಾರಿಗೆ ಅನುಕೂಲ ಕಲ್ಪಿಸಲು, ‘ಅನ್ನ ಸೇವೆ’ ಆ್ಯಪ್‌ನ ಲಭ್ಯತೆಯನ್ನು ಇಂದಿನಿಂದ ದೇಶಾದ್ಯಂತ ವಿಸ್ತರಿಸಲಾಗಿದೆ. ಹೊರರಾಜ್ಯಗಳಲ್ಲಿರುವ ರಾಜ್ಯದ ಪಡಿತರ ಚೀಟಿದಾರರು ಆ್ಯಪ್ ಡೌನಲೋಡ್ ಮಾಡಿಕೊಂಡು ಇ-ಕೆವೈಸಿ ಪೂರ್ಣಗೊಳಿಸಬಹುದಾಗಿದೆ.




