ವಿಟ್ಲ: ಚಲಿಸುತ್ತಿದ್ದ ಆಟೋ ರಿಕ್ಷಾಕ್ಕೆ ಅಡ್ಡಲಾಗಿ ಬಂದ ದನ: ನಿಯಂತ್ರಣ ತಪ್ಪಿ ಆಟೋ ರಿಕ್ಷಾದಿಂದ ರಸ್ತೆಗೆ ಎಸೆಯಲ್ಪಟ್ಟ ಚಾಲಕ ಮೃತ್ಯು
ವಿಟ್ಲ: ಚಲಿಸುತ್ತಿದ್ದ ಆಟೋರಿಕ್ಷಾಕ್ಕೆ ಅಡ್ಡಲಾಗಿ ಬಂದ ದನವನ್ನು ತಪ್ಪಿಸುವ ವೇಳೆ ನಿಯಂತ್ರಣ ತಪ್ಪಿ ಆಟೋರಿಕ್ಷಾದಿಂದ ರಸ್ತೆಗೆ ಎಸೆಯಲ್ಪಟ್ಟ ಚಾಲಕ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ಪುಣಚದಲ್ಲಿ ಮಂಗಳವಾರ ನಡೆದಿದೆ.
ಜಗನ್ನಾಥ ಪೈಸಾರಿ(57) ಮೃತಪಟ್ಟ ದುರ್ದೈವಿ ಚಾಲಕ.
ಮಂಗಳವಾರ ಮಧ್ಯಾಹ್ನ ಊಟ ಮುಗಿಸಿದ ಬಳಿಕ ಪುಣಚದ ಅಟೋರಿಕ್ಷಾ ಪಾರ್ಕಿಂಗ್ ಸ್ಥಳಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ಮಣಿಲ ಎಂಬಲ್ಲಿ ದುರ್ಘಟನೆ ಸಂಭವಿಸಿದ್ದು, ಅಟೋರಿಕ್ಷಾ ರಸ್ತೆಗೆ ಪಲ್ಟಿಯಾಗಿ ಬಿದ್ದ ಕಾರಣ,ತಲೆಗೆ ಗಂಭೀರ ಗಾಯವಾಗಿದ್ದು, ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರೆನ್ನಲಾಗಿದೆ.
ತುಳು ನಾಟಕ ರಂಗದಲ್ಲಿ ಹಾಸ್ಯ ಅಭಿನಯದ ಮೂಲಕ ಮಿಂಚಿದ್ದ ಅವರು, ಕಳೆದ ಮೂವತ್ತು ವರ್ಷಗಳಿಂದ ಆಟೋರಿಕ್ಷಾ ಚಾಲಕರಾಗಿ’ರಿಕ್ಷಾ ಜಗ್ಗಣ್ಣ’ಎಂದೇ ಗುರುತಿಸಲ್ಪಟ್ಟಿದ್ದರು. ಮೃತರ ಮನೆಗೆ ಹಲವಾರು ಮಂದಿ ಭೇಟಿ ನೀಡಿ ಸಂತಾಪ ಸೂಚಿಸಿದರು. ಪತ್ನಿ, ಪುತ್ರಿ, ಪುತ್ರ ಇದ್ದಾರೆ.




