December 15, 2025

ಉಳ್ಳಾಲ: ಸಾಂಪ್ರದಾಯಿಕ ಕೋಳಿ ಅಂಕಕ್ಕೆ ಪೊಲೀಸ್ ದಾಳಿ: ನಗದು ಸಹಿತ ಇಬ್ಬರು ವಶಕ್ಕೆ

0
IMG-20230531-WA0058.jpg

ಉಳ್ಳಾಲ: ಸಾಂಪ್ರದಾಯಿಕ ಕೋಳಿ ಅಂಕಕ್ಕೆ ಉಳ್ಳಾಲ ಪೊಲೀಸರು ದಾಳಿ ನಡೆಸಿರುವ ಘಟನೆ ತಲಪಾಡಿಯ ದೇವಿಪುರದಲ್ಲಿ ನಡೆದಿದ್ದು, ಕೋಳಿ ಸಹಿತ ಆಟಕ್ಕೆ ಪಣವಾಗಿಟ್ಟ ನಗದು ಸಹಿತ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.

ತಲಪಾಡಿ ಗ್ರಾಮದ ದೇವಿಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಎದುರಿರುವ ಖಾಲಿ ಸ್ಥಳದಲ್ಲಿ ದೇವಿಪುರದ ರವಿ ಹಾಗೂ ಇತರ ಜನರು ಗುಂಪು ಸೇರಿಕೊಂಡು ಹಣವನ್ನು ಪಣವಾಗಿಟ್ಟು ಆಟವಾಡುತ್ತಿರುವ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ದಾಳಿ ನಡೆಸಿದ್ದಾರೆ.

ಖಾಲಿ ಜಾಗದಲ್ಲಿ 3 ರಿಂದ 4 ಜನ ಸುತ್ತಲೂ ಗುಂಪಾಗಿ ಕೋಳಿ ಅಂಕದ ಜೂಜಾಟ ನಡೆಸುವಾಗ ದಾಳಿ ನಡೆದಿದೆ. ಹಲವು ಕೋಳಿ, ನಗದು ಹಾಗೂ ಇಬ್ಬರನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ತಲಪಾಡಿ ದೇವಿಪುರ ದೇವಸ್ಥಾನದ ಬಳಿಯಲ್ಲಿ ಪತ್ತಣಾಜೆ ಬಳಿಕ ಮಳೆ ಬರುವ ತನಕ ಸಾಂಪ್ರದಾಯಿಕ ಕೋಳಿ ಅಂಕವು ಬಹಳ ಹಿಂದಿನಿಂದಲೂ ಗ್ರಾಮಸ್ಥರಿಂದ ನಡೆದು ಬರುತ್ತಿತ್ತು. ಇಲ್ಲಿ ಯಾವುದೇ ಜೂಜು ನಡೆಯ ಬಾರದು ಹಾಗೂ ಜಗಳ ಗಲಾಟೆ ನಡೆಯಬಾರದೆಂಬ ನಿಯಮವಿತ್ತು. ಆದರೆ, ಇತ್ತೀಚೆಗಿನ ದಿನಗಳಲ್ಲಿ ಇದೇ ಸಾಂಪ್ರದಾಯಿಕ ಕೋಳಿ ಅಂಕವು ಲಕ್ಷಗಟ್ಟಲೆ ಜೂಜಿನ ಕೇಂದ್ರವಾಗಿದೆ. ಹಾಗೂ ಬೈಕಿನಿಂದ ಹಿಡಿದು ಐಷಾರಾಮದ ಕಾರುಗಳು ನೂರಾರು ಸಂಖ್ಯೆಯಲ್ಲಿ ಕೇರಳ ಕರ್ನಾಟಕದ ಗಡಿ ಭಾಗಗಳಿಂದ ಸೇರಲು ಆರಂಭ ಆಗಿದೆ. ಇತ್ತೀಚೆಗೆ ಮರಳು ಮಾಫಿಯಾ ಮತ್ತು ಇಸ್ಪೀಟ್ ದಂಧೆಗಳಿಗೆ ಕಡಿವಾಣ ಬಿದ್ದು ಇಂತಹ ಅವ್ಯವಹಾರ ಮಾಡುವವರ ವಹಿವಾಟುಗಳು ನಿಂತಾಗ ಇದೇ ಸಾಂಪ್ರದಾಯಿಕ ಕೋಳಿ ಅಂಕಗಳು ಜೂಜಿನ ಕೇಂದ್ರವಾಗಿ ಮಾರ್ಪಟ್ಟು ದೇವರ ಸಾಪ್ರದಾಯಿಕ ಕೋಳಿ ಅಂಕಗಳು ಪೊಲೀಸ್ ದಾಳಿಗಳಿಂದ ನಿಂತು ಹೋಗಿ ಸಮಾಜಕ್ಕೆ ಕಂಟಕ ಆಗುವ ಭೀತಿಯಲ್ಲಿ ಜನರಿದ್ದಾರೆ. ಇನ್ನಾದರೂ ಜೂಜು ಜುಗಾರಿ ಇಲ್ಲದ ಸಾಂಪ್ರದಾಯಿಕ ಕೋಳಿ ಅಂಕಗಳು ನಡೆಯಲಿ ಎಳಂಬ ಅಭಿಪ್ರಾಯವನ್ನು ಸ್ಥಳೀಯರು ಹೇಳಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!