ಮಂಗಳೂರು: ತಮ್ಮದೇ ಪಕ್ಷದ ಪ್ರವೀಣ್ ನೆಟ್ಟಾರ್ ಪತ್ನಿಗೆ ಖಾಯಂ ಉದ್ಯೋಗ ನೀಡಲಾಗದ ಸಂಸದ ರಾಜೀನಾಮೆ ನೀಡಿ, ಮನೆಗೆ ಹೋಗಲಿ: 25 ಸಾವಿರ ರೂ. ಪರ್ಮನೆಂಟ್ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ ಪ್ರತಿಭಾ ಕುಳಾಯಿ
ಮಂಗಳೂರು, ಪ್ರವೀಣ್ ನೆಟ್ಟಾರು ಪತ್ನಿ ಉದ್ಯೋಗ ಕಳೆದುಕೊಂಡ ವಿಚಾರ ರಾಜ್ಯದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಈ ನಡುವೆ ಪ್ರವೀಣ್ ನೆಟ್ಟಾರ್ ಪತ್ನಿ ನೂತನ ಕುಮಾರಿಗೆ ಖಾಯಂ ಉದ್ಯೋಗ ನೀಡಲಾಗದ ಈ ಹಿಂದಿನ ಬಿಜೆಪಿ ಸರಕಾರದ ವಿರುದ್ಧ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ಮುಖಂಡೆ ಪ್ರತಿಭಾ ಕುಳಾಯಿ, ತನ್ನದೇ ಪಕ್ಷದ ಅಸಹಾಯಕ ಮಹಿಳೆಯೊಬ್ಬಳಿಗೆ ಖಾಯಂ ಉದ್ಯೋಗ ನೀಡಲಾಗದ ಸಂಸದ ಅಯೋಗ್ಯ. ಸಂಸದ ನಳಿನ್ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಸರಕಾರ ಪ್ರವೀಣ್ ಪತ್ನಿಗೆ ಕಾಂಟ್ರಕ್ಟ್ ಬೇಸಿಸ್(ಗುತ್ತಿಗೆ ಆಧಾರ)ನಲ್ಲಿ ಉದ್ಯೋಗ ನೀಡಿತ್ತು. ಆದರೆ, ಅದರ ಅವಧಿ ಇದೀಗ ಪೂರ್ಣಗೊಂಡು ಕೆಲಸ ಹೋಗಿದೆ. ಇದು ಕಾಂಗ್ರೆಸ್ ತಪ್ಪಲ್ಲ. ಬಸವರಾಜ್ ಬೊಮ್ಮಾಯಿ ಸರಕಾರ ಮಾಡಿದ ಎಡವಟ್ಟು. ೨-೩ ಬಾರಿ ಸಂಸದರಾಗಿ ಆಯ್ಕೆಯಾದರೂ ಉದ್ಯೋಗ ನೀಡಲಾಗದ ನಳಿನ್ ಸಂಸದ ಸ್ಥಾನಕ್ಕೆ ಅಸಮರ್ಥ ಎಂದು ಕಿಡಿ ಖಾರಿದ್ದಾರೆ.
ಇನ್ನು 20ರಿಂದ 25ಸಾವಿರ ವೇತನವಿರುವ ಉದ್ಯೋಗವನ್ನು ಕಾಂಟ್ರಕ್ಟ್ ಬೇಸಿಸ್ ನಲ್ಲಿ ನಾಳೆಯೇ ತೆಗೆದುಕೊಡಬಹುದು. ನಾನು ಸಿಎಂ ಸಿದ್ದರಾಮಯ್ಯ ಅವರ ಜೊತೆಯಲ್ಲಿ ಮಾತುಕತೆ ನಡಿಸಿ ಪರ್ಮನೆಂಟ್ ಉದ್ಯೋಗ ತೆಗೆಸುಕೊಡುವುದಾಗಿ ಪ್ರತಿಭಾ ಕುಳಾಯಿ ಭರವಸೆ ನೀಡಿದ್ದಾರೆ.





