“ಗೋಸ್ಮರಿ ಫ್ಯಾಮಿಲಿ” ಎಂಬ ವಿಸ್ಮಯ ಸಿನಿಮಾ..!
“ಗೋಸ್ಮರಿ ಫ್ಯಾಮಿಲಿ” ತುಳು ಚಲನಚಿತ್ರ ಬಿಡುಗಡೆಗೆ ಮುನ್ನಾ ದಿನ ಗುರುವಾರ ಪ್ರೀಮಿಯರ್ ಶೋ ನೋಡಲು ಸ್ನೇಹಿತ ಸಾಯಿಕೃಷ್ಣ ಕುಡ್ಲ ಪ್ರೀತಿಯಿಂದ ಆಹ್ವಾನಿಸಿದ್ಡರು.
ಅವರು ಕರೆದಾಗ ಹೋಗಲೇ ಬೇಕೆನ್ನುವಷ್ಟು ನಂಟು ನಮ್ಮೊಳಗಿದೆ. ಅಂದಹಾಗೆ ಸಾಯಿಕೃಷ್ಣ ಅವರೇ ಈ ಚಿತ್ರವನ್ನು ಬರೆದು ನಿರ್ದೇಶಿಸಿದ್ದಾರೆ. ತುಳು ಚಿತ್ರರಂಗದ ಬಹುತೇಕ ಎಲ್ಲಾ ಪ್ರಮುಖ ಕಲಾವಿದರು ಗೋಸ್ಮರಿ ಫ್ಯಾಮಿಲಿಯಲ್ಲಿದ್ದಾರೆ.
“ಗೋಸ್ಮರಿ” ತುಳುಪದ. ಕಾಳಜಿಯಿಲ್ಲದ ಅಥವಾ ಚಿಂತೆಯಿಲ್ಲದ ಅಥವಾ ಲೋಕಪ್ರಜ್ಞೆ ರಹಿತ ಅಂತ ಕನ್ನಡದಲ್ಲಿ ಅರ್ಥೈಸಬಹುದು. ಒಟ್ರಾಸಿ ಕುಟುಂಬ ಅಂತಾನೂ ಹೇಳಬಹುದು. ಅಂತಹ ಫ್ಯಾಮಿಲಿಯ ನಡುವೆ ಹೆಣೆದ ಮನತಣಿಸುವ ಕಥೆಯಿದು.
ಸಿನಿಮಾದ ಪ್ರಾರಂಭದಿಂದ ಕೊನೆಯ ತನಕ ನಮ್ಮನ್ನು ನಕ್ಕು ನಗಿಸುತ್ತಾ ಸಾಗಿಸುವುದರ ಜೊತೆಗೆ ಪ್ರಜ್ಞೆ ಇಲ್ಲದೇ ಕುಟುಂಬ ಸಾಗಿಸಿದರೆ ಆಗುವ ದುರಂತವನ್ನು ಚಿತ್ರ ತೆರೆದಿಟ್ಟಿದೆ. ಹಿನ್ನೆಲೆ ಮತ್ತು ಮುನ್ನೆಲೆ ಕಲಾವಿದರು ಹಾಕಿರುವ ಟಫ್ ಎಫರ್ಟ್ ಗೆ ಚಿತ್ರದಲ್ಲಿ ಫಲಿತಾಂಶ ಪ್ರಾಪ್ತವಾಗಿದೆ.
ಕಠಿಣ ಪರಿಶ್ರಮದ ಫಲವಾಗಿ ಚಿತ್ರ ಅದ್ಭುತವಾಗಿ ಮೂಡಿ ಬಂದಿದೆ. ಎಲ್ಲೂ ಬೋರಿಂಗ್ ಇಲ್ಲ. ಕ್ಷಣಕ್ಷಣಕ್ಕೂ ಮನಸ್ಸನ್ನು ಹಿಡಿದಿಟ್ಟುಕೊಳ್ಳುವ ಚಿತ್ರವಿದು. ಸತತ ಎರಡೂವರೆ ತಾಸಿನ ಅಲ್ಟ್ರಾ ಟ್ಯಾಲೆಂಟೆಡ್ ಕಾಮಿಡಿ. ಕೊನೆಗೆ ಚಿಂತನೆಗೆ ಹಚ್ಚುವ ವಿಚಾರಗಳು. ಎಲ್ಲವೂ ಹಣ, ಶ್ರೀಮಂತಿಕೆಯಲ್ಲ. ಪ್ರೀತಿ, ಸಹಬಾಳ್ವೆಯಲ್ಲೂ ಜೀವನದ ರಸವಿದೆ.
ಕಳ್ಳತನ, ಮೋಸ, ದ್ರೋಹ ಮೊದಲಾದವು ಕ್ಷಣಿಕ ಎಂಬುವುದನ್ನು ಚಿತ್ರ ವಿವಿಧ ಆಯಾಮದಲ್ಲಿ ತೋರಿಸಿಕೊಟ್ಟಿದೆ. ಚಿತ್ರದ ಸಂಗೀತ, ಹಾಡುಗಳು ಅದ್ಭುತ. ಹಾಡುಗಳ ಕಾಸ್ಟ್ಯೂಮ್ಸ್, ಲೊಕೇಶನ್, ಸೆಟ್ ಮನಮೋಹಕ. ರೋಮಾಂಚನ.
ಮಕ್ಕಳು, ಮಹಿಳೆಯರಿಂದ ಹಿಡಿದು ಇಡೀ ಕುಟುಂಬ ನೋಡಬಹುದಾದ ಅಪರೂಪದ, ಒಮ್ಮೆ ನೋಡಿದರೆ ಮತ್ತೊಮ್ಮೆ ಹೋಗಬೇಕೆನ್ನುವ ಮನೋಜ್ಞವಾದ ಕಥೆಯನ್ನು ಬರೆದು ನಿರ್ದೇಶಿಸಿದ ಗುಂಗುರು ಕೂದಲ ಗೆಳೆಯ ಸಾಯಣ್ಣನಿಗೆ (ಸಾಯಿಕೃಷ್ಣ ಕುಡ್ಲ) ಇಂತಹ ಇನ್ನಷ್ಟು ಚಿತ್ರಕಥೆ ಬರೆಯಲು ಪ್ರೇರಣೆ ಸಿಗಲಿ.
ಶಕುಂತಲಾ ಅಂಚನ್ ನಿರ್ಮಾಣದಲ್ಲಿ ಸ್ನೇಹಿತರಾದ ಡಾ.ದೇವದಾಸ್ ಕಾಪಿಕಾಡ್ ಅವರ ಲೀಲಾಜಾಲವಾದ ಅದ್ಭುತ ಅಭಿನಯ, ಕಾಮಿಡಿ ಪಂಚ್, ಅರ್ಜುನ್ ಕಾಪಿಕಾಡ್, ಸಮತಾ ಅಮೀನ್ ಅವರ ಮುಖ್ಯ ಪಾತ್ರ, ನವೀನ್ ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರ್ ಅವರ ಕಾಂಬಿನೇಶನ್ ಜೋಕ್ಸ್, ಉಮೇಶ್ ಮಿಜಾರ್, ಪ್ರಸನ್ನ ಶೆಟ್ಟಿ, ಸಂದೀಪ್ ಶೆಟ್ಟಿ ಮೊದಲಾದವರ ನಟನೆ ಗೋಸ್ಮರಿ ಫ್ಯಾಮಿಲಿಗೆ ಜೀವ ತುಂಬಿದೆ. ಪಿಎಲ್ ರವಿಯವರ ಛಾಯಾಗ್ರಹಣ ಯಾವುದೇ ಕೊರತೆಗೆ ಆಸ್ಪದ ನೀಡಿಲ್ಲ.
ಆಕಾಶ್ ಪ್ರಜಾಪತಿಯವರ ಸಂಗೀತ ಸಂಯೋಜನೆ ಕ್ಲಾಸ್ & ಮಾಸ್. ಪ್ರೀಮಿಯರ್ ಶೋದಲ್ಲಿ ಬಹುತೇಕ ಎಲ್ಲಾ ಕಲಾವಿದರೂ ವೀಕ್ಷಕರಾಗಿ ಭಾಗವಹಿಸಿ ಅನನ್ಯವಾದ ಚಿತ್ರ ಬಿಡುಗಡೆಗೊಳಿಸಿದ ಮಾಯಾಲೋಕದಲ್ಲಿ ತೇಲಾಡುತ್ತಿದ್ದರು. ನಮ್ಮ ವಿಮರ್ಶೆಗಿಂತಲೂ ಚಿತ್ರವನ್ನೊಮ್ಮೆ ನೋಡಿ ಆನಂದಿಸಿ. ನಿಮ್ಮ ಸಮಯ ಮತ್ತು ಹಣ ಖಂಡಿತಾ ವ್ಯರ್ಥವಾಗದು.





