ಪುತ್ತೂರು: ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸ್ ದೌರ್ಜನ್ಯ ವಿಚಾರ: ಹರೀಶ್ ಪೂಂಜ ಪುತ್ತೂರಿಗೆ ಬಂದು ಮಾತನಾಡುವ ಅಗತ್ಯವಿಲ್ಲ: ನನ್ನ ಕ್ಷೇತ್ರದಲ್ಲಿ ಆಗಿರುವ ಘಟನೆಗೆ ನ್ಯಾಯ ಕೊಡಿಸುವ ಶಕ್ತಿ ನನಗಿದೆ: ಅಶೋಕ್ ಕುಮಾರ್ ರೈ
ಪುತ್ತೂರು: ಬ್ಯಾನರ್ ಗೆ ಚಪ್ಪಲಿ ಹಾರ ಹಾಕಿರುವ ಆರೋಪಿಗಳಿಗೆ ಡಿವೈಎಸ್‌ಪಿ ಕಚೇರಿಯಲ್ಲಿ ದೌರ್ಜನ್ಯ ನಡೆಯಲು, ಬಾಸುಂಡೆ ಬರುವ ರೀತಿಯಲ್ಲಿ ಹಲ್ಲೆಯಾಗಲು ಅಧಿಕಾರಿಗಳಿಗೆ ಬಿಜೆಪಿ ನಾಯಕರ ಒತ್ತಡವೇ ಕಾರಣವಾಗಿದೆ, ಯಾರೆಲ್ಲಾ ಅಧಿಕಾರಿಗಳಿಗೆ ಕರೆ ಮಾಡಿ ಒತ್ತಡ ಹಾಕಿದ್ದಾರೋ ಅವರ ಹೆಸರನ್ನು ಎರಡು ದಿನದಲ್ಲಿ ಬಹಿರಂಗಪಡಿಸುವೆ ಎಂದು ಪುತ್ತೂರು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
ಬ್ಯಾನರ್ ಹಾಕಿದ ಆರೋಪಿಗಳಿಗೆ ಹಲ್ಲೆ ನಡೆಸಿದ್ದು ಕಾಂಗ್ರೆಸ್ಸಿನವರೇ, ಕಾಂಗ್ರೆಸ್ ಸರಕಾರ ಬಂದರೆ ಹೀಗೆಲ್ಲಾ ಆಗುತ್ತದೆ ಎಂದು ಪುತ್ತೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಹೇಳಿಕೆ ನೀಡಿದ ಕಲ್ಲಡ್ಕ ಪ್ರಭಾಕರ ಭಟ್ ಆರೋಪಕ್ಕೆ ಖಾರವಾಗಿಯೇ ಉತ್ತರಿಸಿದ ಶಾಸಕ ಅಶೋಕ್ ರೈ ನನ್ನ ಕ್ಷೇತ್ರದಲ್ಲಿ ಅನ್ಯಾಯವಾದವರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ, ಪ್ರಕರಣದ ತನಿಖೆ ನಡೆಸಿ ತಪ್ಪತಸ್ಥರ ವಿರುದ್ದ ಎಫ್‌ಐಆರ್ ದಾಖಲಿಸಿ ಅಮಾನತು ಮಾಡುವಂತೆ ಸೂಚಿಸಿದ್ದೆ ಅದರಂತೆ ತನಿಖೆ ನಡೆಸಿ ತಪ್ಪತಸ್ಥರ ವಿರುದ್ದ ಕ್ರಮ ಜರುಗಿಸಲಾಗಿದೆ. ಅಧಿಕಾರಿಗಳ ಮೇಲೆ ಒತ್ತಡ ಹಾಕಿದವರ ಕಾಲ್ ಲಿಸ್ಟ್ ತೆಗೆದು ಅದನ್ನು ಎರಡು ದಿನದೊಳಗೆ ಬಹಿರಂಗಪಡಿಸುವೆ ಆವಾಗ ಪುತ್ತೂರಿನ ಜನತೆಗೆ ಎಲ್ಲವೂ ಗೊತ್ತಾಗಲಿದೆ ಎಂದು ಹೇಳಿದರು.ಬೆಳ್ತಂಗಡಿ ಶಾಸಕ ಹರೀಶ್‌ಪೂಂಜರವರು ಪುತ್ತೂರಿಗೆ ಬಂದು ಈ ವಿಚಾರದಲ್ಲಿ ಮತನಾಡುವ ಅಗತ್ಯವಿಲ್ಲ. ನನ್ನ ಕ್ಷೇತ್ರದಲ್ಲಿ ಆಗಿರುವ ಘಟನೆಗೆ ನ್ಯಾಯ ಕೊಡಿಸುವ ಶಕ್ತಿ ನನಗಿದೆ ಎಂದು ಹೇಳಿದರು.




