November 10, 2024

ಪುತ್ತೂರು: ಚುನಾವಣೆಯಲ್ಲಿ ಅಶೋಕ್ ರೈ ಜಯಗಳಿಸುತ್ತಾರೆಂದು ಭವಿಷ್ಯ ನುಡಿದು ಹಾರೈಸಿದ್ದ ದಿ. ಮೌಲನಾ ಅಬ್ದುಲ್ ರಝಾಕ್ ಹಾಜಿ ಮಲೇಷಿಯಾ

0

ಪುತ್ತೂರು: ನೀವು ಚುನಾವಣೆಯಲ್ಲಿ ಜಯ ಗಳಿಸುತ್ತೀರಿ ಎಂದು ಅಶೋಕ್ ಕುಮಾರ್ ರೈ ಅವರಿಗೆ ಹಾರೈಸಿ, ಭವಿಷ್ಯ ನುಡಿದಿದ್ದ ಮೌಲಾನಾ ಅಬ್ದುಲ್ ರಝಾಕ್ ಹಾಜಿ ಮಲೇಷಿಯಾ ಅವರಿಗೆ ಅಶೋಕ್ ಕುಮಾರ್ ರೈ ಅವರ ವಿಜಯೋತ್ಸವದಲ್ಲಿ ಪಾಲ್ಗೊಳ್ಳಲು ಆಗಲೇ ಇಲ್ಲ.ಮಲೇಷಿಯಾದ ದೊರೆಗೆ ರಾಜಗುರುವಿನಂತಿದ್ದವರು. ಸಿಂಗಾಪುರ, ದುಬೈ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಆಧ್ಯಾತ್ಮಿಕ ಸಭೆ ನಡೆಸಿದ ಮೇರು ವ್ಯಕ್ತಿತ್ವದ ಹಿರಿಯ ವಿದ್ವಾಂಸ ಮೌಲಾನಾ ಅಬ್ದುಲ್ ರಝಾಕ್ ಹಾಜಿ ಮಲೇಷಿಯಾ. ದೇಶ – ವಿದೇಶಗಳಲ್ಲಿ ಖ್ಯಾತರಾದ ಇವರು ಪುತ್ತೂರಿನ ಕಬಕ ನಿವಾಸಿ. ತನ್ನ 61ನೇ ಇಳಿ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ್ದಾರೆ. ಹೀಗೆ ನಮ್ಮೆಲ್ಲರನ್ನು ಅಗಲುವ ಮುನ್ನ, ವಿಸ್ಮಯವೊಂದಕ್ಕೆ ನಿದರ್ಶನ ನೀಡಿಯೇ ಹೊರಟು ಹೋದರು - ಅದು ಅಶೋಕ್ ಕುಮಾರ್ ರೈ ಅವರ ಗೆಲುವು.

ಏಪ್ರಿಲ್ 27 ರಂದು ಅಶೋಕ್ ಕುಮಾರ್ ರೈ ಅವರು ಉಸ್ತಾದ್ ಅವರ ಆಶೀರ್ವಾದ ಪಡೆದಿದ್ದರು. ಮೇ 3 ರಂದು ಮೌಲಾನಾ ಅಬ್ದುಲ್ ರಝಾಕ್ ಹಾಜಿ ಅವರು ಇಹಲೋಕ ತ್ಯಜಿಸಿದರು. ಅಶೋಕ್ ರೈ ಗೆಲುವಿಗೆ ಹಾರೈಸಿ, ತನಗೇನು ಗೊತ್ತೇ ಇಲ್ಲ ಎಂಬಂತೆ ಹೊರಟು ಹೋದರು. ನಿಷ್ಕಲ್ಮಶ, ನಿಷ್ಕಪಟ ಮನಸ್ಸಿನ ಉಸ್ತಾದ್ ಅವರು ಸಮಾಜಕ್ಕೆ ಆದರ್ಶ ಹಾಗೂ ಮಾದರಿ ಪುರುಷ.

ಹಾಗೆ ನೋಡಿದರೆ ಅಶೋಕ್ ಕುಮಾರ್ ರೈ ಅವರ ಗೆಲುವು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಸುಲಭದ ತುತ್ತಾಗಿರಲಿಲ್ಲ. ಟಿಕೇಟ್ ಪಡೆದುಕೊಳ್ಳುವುದೋ, ಸಾಧ್ಯವೇ ಇಲ್ಲದ ಮಾತು. ಪ್ರಬಲ ಪೈಪೋಟಿ, ಬಿಜೆಪಿಯಿಂದ ಬಂದವರು ಎಂಬ ವಕ್ರದೃಷ್ಟಿಯ ನಡುವೆಯೇ ಟಿಕೇಟ್ ಗಿಟ್ಟಿಸಿಯೇ ಬಿಟ್ಟರು. ಅಷ್ಟರಲ್ಲಿ ಚುನಾವಣೆಯೂ ಘೋಷಣೆಯಾಗಿತ್ತು. ಬಿಜೆಪಿಯೊಳಗೇ ಅಸಮಾಧಾನದ ಕಿಚ್ಚು ಹೊಗೆಯಾಡತೊಡಗಿತು. ಇದು ಅಶೋಕ್ ಕುಮಾರ್ ರೈ ಅವರಿಗೆ ವರದಾನವಾಯಿತು. ಹಿಂದಿನ ಅವಧಿಗಿಂತ ಕಡಿಮೆ ಮತ, ಪಕ್ಷೇತರ ಅಭ್ಯರ್ಥಿಯ ಟೈಟ್ ಪೈಟ್ ನಡುವೆ ಜಯಭೇರಿ ಬಾರಿಸಿಯೇ ಬಿಟ್ಟರು. ಅಂದರೆ ಟಿಕೇಟ್ ಪಡೆದುಕೊಳ್ಳುವುದರಿಂದ ಹಿಡಿದು ಗೆಲ್ಲುವವರೆಗಿನ ಎಡರು – ತೊಡರುಗಳನ್ನು ಅಶೋಕ್ ರೈ ಅವರು ದಾಟಿಕೊಂಡು, ಜಯಿಸಿಕೊಂಡೇ ಬಂದರು. ಆದರೆ ದುರಾದೃಷ್ಟ ನೋಡಿ, ಅವರ ಗೆಲುವಿನ ವಿಜಯೋತ್ಸವ ನೋಡಲು ಉಸ್ತಾದರೇ ಇಲ್ಲದಾದರು.

ಕೊಡುಗೈ ದಾನಿಯಾಗಿ, ಪರೋಪಕಾರಿಯಾಗಿ ಜನಾನುರಾಗಿಯಾಗಿದ್ದ ಮೌಲಾನಾ ಅಬ್ದುಲ್ ರಝಾಕ್ ಹಾಜಿ ಮಲೇಷಿಯಾ ಅವರು, ಮಿತ್ತೂರು ಸಿರಾಜುಲ್ ಹುದಾ ಜುಮಾ ಮಸೀದಿಯ ಗೌರವಾಧ್ಯಕ್ಷರಾಗಿ, 10 ವರ್ಷ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು ಎನ್ನುವುದು ಸ್ಮರಣಾರ್ಹ.

Leave a Reply

Your email address will not be published. Required fields are marked *

error: Content is protected !!