ವಿಡಿಯೋಗಾಗಿ ಗಂಟೆಗೆ 300 ಕಿ.ಮೀ. ವೇಗದಲ್ಲಿ ಬೈಕ್ ಚಾಲನೆ: ಯೂಟ್ಯೂಬರ್ ಮೃತ್ಯು
ನವದೆಹಲಿ: ಯೂಟ್ಯೂಬ್ ವಿಡಿಯೋಗಾಗಿ ಗಂಟೆಗೆ 300 ಕಿ.ಮೀ ವೇಗದಲ್ಲಿ ಬೈಕ್ ಓಡಿಸುವಾಗ ನಿಯಂತ್ರಣ ತಪ್ಪಿ ಡಿವೈಡರ್ಗೆ ಬೈಕ್ ಡಿಕ್ಕಿಯಾಗಿ ಯೂಟ್ಯೂಬರ್ ದುರಂತ ಸಾವಿಗೀಡಾಗಿರುವ ಘಟನೆ ಬುಧವಾರ (ಮೇ.4) ಬೆಳಗ್ಗೆ 10 ಗಂಟೆಗೆ ಯುಮುನಾ ಎಕ್ಸ್ಪ್ರೆಸ್ವೇನಲ್ಲಿ ನಡೆದಿದೆ.
ಮೃತ ಯೂಟ್ಯೂಬರ್ನನ್ನು ಅಗಸ್ತ್ಯ ಚೌಹಾಣ್ (22) ಎಂದು ಗುರುತಿಸಲಾಗಿದೆ. ಈತ ಉತ್ತರಾಖಂಡದ ಡೆಹ್ರಾಡೂನ್ನ ಕನ್ನಾಟ್ ಪ್ಲೇಸ್ ನಿವಾಸಿ. ಬೈಕ್ ರೈಡರ್ ಹಾಗೂ ಯೂಟ್ಯೂಬರ್ ಆಗಿದ್ದ. ಈತ ವೃತ್ತಿಪರ ಬೈಕರ್ ಆಗಿದ್ದ. ಆದರೆ, ದುರಾದೃಷ್ಟವಶಾತ್ ಅದೇ ಬೈಕ್ನಿಂದ ಇಂದು ಮರಳಿ ಬಾರದ ಲೋಕಕ್ಕೆ ಪಯಣಿಸಿದ್ದಾನೆ.
ಅಗಸ್ತ್ಯ ಅವರು ZX 10R ನಿಂಜಾ ಸೂಪರ್‌ಬೈಕ್ನಲ್ಲಿ ಪ್ರಯಾಣಿಸುವಾಗ ತಮ್ಮ ಯೂಟ್ಯೂಬ್ ಚಾನೆಲ್ಗಾಗಿ ಗಂಟೆಗೆ 300 ಕಿ.ಮೀ ವೇಗದಲ್ಲಿ ಓಡಿಸಲು ಪ್ರಯತ್ನಿಸಿದರು. ಆದರೆ, ಬೈಕ್ ನಿಯಂತ್ರಣ ಕಳೆದುಕೊಂಡು ಉತ್ತರ ಪ್ರದೇಶದ ಯಮುನಾ ಎಕ್ಸ್ಪ್ರೆಸ್ವೇನಲ್ಲಿ ಡಿವೈಡರ್ಗೆ ಡಿಕ್ಕಿ ಹೊಡೆದು ದುರಂತ ಸಾವಿಗೀಡಾಗಿದ್ದಾರೆ. ಅಗಸ್ತ್ಯ ಧರಿಸಿದ್ದ ಹೆಲ್ಮೆಟ್ ಕೂಡ ಛಿದ್ರವಾಗಿದೆ. ತಲೆಗೆ ಜೋರಾದ ಪೆಟ್ಟು ಬಿದ್ದಿದ್ದರಿಂದ ಅಗಸ್ತ್ಯ ಸ್ಥಳದಲ್ಲೇ ಕೊನೆಯುಸಿರೆಳೆದನು. ಘಟನೆ ನಡೆದ ಜಾಗದಲ್ಲಿ ಅಗಸ್ತ್ಯ ದೇಹದ ಸುತ್ತ ರಕ್ತ ಮಡುಗಟ್ಟಿತ್ತು.




