ಕ್ರಿಕೆಟಿಗ ಮೊಹಮ್ಮದ್ ಶಮಿ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋದ ಪತ್ನಿ
ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಆಟಗಾರ ಮೊಹಮದ್ ಶಮಿ ವಿರುದ್ಧ ಹೊರಡಿಸಲಾಗಿದ್ದ ಬಂಧನ ವಾರಂಟ್ಗೆ ತಡೆ ನೀಡಲಾಗಿದ್ದು, ಇದರ ತೆರವಿಗೆ ನಿರಾಕರಿಸಿದ ಕೋಲ್ಕತ್ತಾ ಹೈಕೋರ್ಟ್ ಆದೇಶದ ವಿರುದ್ಧ ಪತ್ನಿ ಹಸೀನ್ ಜಹಾನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಅಲ್ಲದೇ, ಕಳೆದ 4 ವರ್ಷಗಳಿಂದ ಪ್ರಕರಣ ಯಾವುದೇ ಪ್ರಗತಿ ಕಂಡಿಲ್ಲ ಎಂದೂ ಮನವಿಯಲ್ಲಿ ಆಪಾದಿಸಿದ್ದಾರೆ.
ಪ್ರಕರಣವೇನು?: ಶಮಿ ಮೇಲೆ ಹಸೀನ್ ಜಹಾನ್ ವರದಕ್ಷಿಣೆ ಕಿರುಕುಳ ಮತ್ತು ಅಕ್ರಮ ಸಂಬಂಧ ಪ್ರಕರಣ ದಾಖಲಿಸಿದ್ದು, ಅಲಿಪುರ ಮ್ಯಾಜಿಸ್ಟ್ರೇಟ್ ಕೋರ್ಟ್ ಕ್ರಿಕೆಟರ್ ವಿರುದ್ಧ ಬಂಧನ ವಾರಂಟ್ ಹೊರಡಿಸಿತ್ತು.
ಇದನ್ನು ಪಶ್ಚಿಮ ಬಂಗಾಳದ ಸೆಷನ್ಸ್ ಕೋರ್ಟಲ್ಲಿ ಪ್ರಶ್ನಿಸಲಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್ ಬಂಧನಕ್ಕೆ ತಡೆ ನೀಡಿತ್ತು. ಇದರ ವಿರುದ್ಧ ಹಸೀನಾ ಜಹಾನ್ ಕೋಲ್ಕತ್ತಾ ಹೈಕೋರ್ಟ್ ಮೇಲ್ಮನವಿ ಸಲ್ಲಿಸಿದ್ದರು. ಆದರೆ, ಕೋರ್ಟ್ ತಡೆಯನ್ನು ತೆರವು ಮಾಡಲು ನಿರಾಕರಿಸಿತ್ತು. ಹೀಗಾಗಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ.
ಮೊಹಮ್ಮದ್ ಶಮಿ ವಿರುದ್ಧ ಅವರ ಪತ್ನಿ ನಟಿ, ಮಾಡೆಲ್ ಹಸೀನಾ ಜಹಾನ್ ಅಕ್ರಮ ಸಂಬಂಧ, ವರದಕ್ಷಿಣೆ ಕಿರುಕುಳದಂತಹ ಗಂಭೀರ ಆರೋಪ ಮಾಡಿದ್ದಾರೆ. 4 ವರ್ಷಗಳ ಹಿಂದೆಯೇ ಇಬ್ಬರೂ ಬೇರ್ಪಟ್ಟಿದ್ದಾರೆ.
ಶಮಿ ಅಕ್ರಮವಾಗಿ ವಿವಾಹೇತರ ಲೈಂಗಿಕ ಸಂಬಂಧಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವಿಶೇಷವಾಗಿ ಕ್ರಿಕೆಟ್ ಪ್ರವಾಸದ ವೇಳೆ ಇದನ್ನು ನಡೆಸಿದ್ದಾರೆ.
ಬಿಸಿಸಿಐ ಒದಗಿಸಿದ ಹೋಟೆಲ್ ಕೊಠಡಿಗಳಲ್ಲಿಯೇ ಅಕ್ರಮ ಸಂಬಂಧ ಮುಂದುವರಿಸಿದ್ದಾರೆ. ತನಗೆ ವರದಕ್ಷಿಣೆ ನೀಡಲು ಕೋರಿದ್ದಾರೆ. ನನ್ನಿಂದ ಹಣ ಪಡೆದುಕೊಂಡಿದ್ದಾರೆ ಎಂದೆಲ್ಲ ಗಂಭೀರ ಆರೋಪ ಮಾಡಿದ್ದಾರೆ.




