ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಅಪರಿಚಿತ ವ್ಯಕ್ತಿಯಿಂದ ಜೀವ ಬೆದರಿಕೆ ಕರೆ: ದೂರು ದಾಖಲು
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರ ಮೊಬೈಲ್ ಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆಯೊಡ್ಡಿರುವ ಘಟನೆ ವರದಿಯಾಗಿದೆ.
ಇದೇ ತಿಂಗಳ 20 ರಂದು ಜಿಲ್ಲಾಧಿಕಾರಿಯ ಕಚೇರಿಯಲ್ಲಿ ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ವೀಕ್ಷಕರೊಂದಿಗೆ ಸಭೆ ನಡೆಸುತ್ತಿದ್ದ ವೇಳೆ ಅವರ ಮೊಬೈಲ್ ಗೆ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಕರೆ ಬಂದಿದೆ. ಕರೆ ಸ್ವೀಕರಿಸಿದ ಜಿಲ್ಲಾಧಿಕಾರಿಗೆ ಅಪರಿಚಿತ ವ್ಯಕ್ತಿಯು ಅವಾಚ್ಯವಾಘಿ ನಿಂದಿಸಿದ್ದು, ಜೊತೆಗೆ ಓರ್ವ ಕೆಎಂಎಫ್ ಸಿಬ್ಬಂದಿಯನ್ನು ಮಂಗಳೂರಿನಿಂದ ತುಮಕೂರಿಗೆ ಕಳುಹಿಸಿಕೊಡಬೇಕು ಎಂದು ಬೇಡಿಕೆ ಇಟ್ಟು ಜೀವಬೆದರಿಕೆ ಹಾಕಿದ್ದಾನೆ ಎಂದು ತಿಳಿದು ಬಂದಿದೆ.
ಅವಾಚ್ಯ ಶಬ್ದದಿಂದ ಬೈದು ಬೆದರಿಕೆ ಹಾಕಿದ ಬಗ್ಗೆ ನಗರದ ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.




