ಬೆಳ್ತಂಗಡಿ: ದೇವರ ಪಲ್ಲಕ್ಕಿ ಹೊತ್ತ ವಿವಾದ:
ಜಿಎಸ್ಬಿ ಸಮುದಾಯದಲ್ಲಿ ಗೊಂದಲ, ದಲಿತರ ಸ್ವಾಗತ
ಬೆಳ್ತಂಗಡಿ: ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಆಡಳಿತಕ್ಕೆ ಒಳಪಟ್ಟ ಲಾಯಿಲ ವೆಂಕಟರಮಣ ದೇವಾಲಯದ ದೇವರ ಪಲ್ಲಕ್ಕಿಯನ್ನು ಅನ್ಯ ಜಾತಿಯವರು ಹೊತ್ತು ನಡೆದಿರುವ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರತಿ ವರ್ಷ ಕಾರ್ತಿಕ ಹುಣ್ಣಿಮೆಯಂದು ದೀಪೋತ್ಸವ ನಡೆಯುತ್ತದೆ ಈ ಸಂಧರ್ಭದಲ್ಲಿ ದೇವರ ಪೇಟೆ ಸವಾರಿ ಉತ್ಸವವಿರುತ್ತದೆ. ಈ ಉತ್ಸವದಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಬ್ರಹ್ಮೋಪದೇಶ ಸಂಸ್ಕಾರವನ್ನು ಪಡೆದಿರುವ ಯುವಕರು ಮಾತ್ರ ದೇವರ ಪಲ್ಲಕ್ಕಿ ಹೊರುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯವಾಗಿದೆ. ಈ ಬಾರಿ ಈ ಸಂಪ್ರದಾಯವನ್ನು ಮುರಿದು ಶೂದ್ರ ಸಮುದಾಯದ ಬಂಟ ಜಾತಿಯ ಬೆಳ್ತಂಗಡಿಯ ಶಾಸಕರಾದ ಹರೀಶ್ ಪೂಂಜರಿಂದ ದೇವರ ಪಲ್ಲಕ್ಕಿಯನ್ನು ಹೊರಿಸಲಾಯಿತು. ಇದೀಗ ಈ ಘಟನೆ ವಿವಾದಕ್ಕೆ ಕಾರಣವಾಗಿದೆ ಬೆಳ್ತಂಗಡಿ ಸಮೀಪದ ಲಾಯಿಲ ಜಂಕ್ಷನ್ ನಲ್ಲಿರುವ ವೆಂಕಟರಮಣ ದೇವಾಲಯದ ಆಡಳಿತ ಮಂಡಳಿಯ ಈ ನಡೆಯ ಬಗ್ಗೆ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದೊಳಗೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಈ ಬಗ್ಗೆ ಆಲ್ ಟೆಂಪಲ್ ಅಸೋಸಿಯೇಷನ್ ನವರು ತಕರಾರು ಎತ್ತಿದ್ದಾರೆ ಮತ್ತು ನಡೆದ ಬೆಳವಣಿಗೆ ಬಗ್ಗೆ ಮಾಹಿತಿ ಕೇಳಿದ್ದಾರೆ ಎನ್ನಲಾಗಿದೆ.
ವಿವಾದ ಇಲ್ಲಿಗೂ ಕೊನೆಗೊಳ್ಳದೆ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಕಾಶೀ ಮಠದ ಸ್ವಾಮಿಗಳ ಬಳಿಗೂ ಹೋಗಿದೆ ಎನ್ನಲಾಗಿದೆ. ಬಂಟ ಜಾತಿಯ ವ್ಯಕ್ತಿಗೆ ದೇವರ ಪಲ್ಲಕ್ಕಿ ಹೊರಲು ಅವಕಾಶ ನೀಡಿದ್ದನ್ನು ದಲಿತ ಹಕ್ಕುಗಳ ಹೋರಾಟ ಸಮಿತಿಯು ಸ್ವಾಗತಿಸಿದೆ ಹಾಗೂ ದಲಿತರಿಗೂ ದೇವರ ಪಲ್ಲಕ್ಕಿ ಹೊರಲು ಅವಕಾಶ ಕಲ್ಪಿಸಬೇಕೆಂದು ಕೇಳಿಕೊಂಡಿದೆ.
ಈ ನಡುವೆ ನವೆಂಬರ್ 24 ರಂದು ನಡೆಯುವ ಮಕ್ಕಳ ಹುಣ್ಣುಮೆ ದಿನ ದೇವರ ಪಲ್ಲಕ್ಕಿ ಹೊರಲು ದಲಿತ ಸಮುದಾಯದ ಯುವಕರು ದೇವಾಲಯಕ್ಕೆ ತೆರಳಲು ನಿರ್ಧರಿಸಿದ್ದು, ತಾಲೂಕಿನ ಪ್ರಗತಿಪರ ಚಳವಳಿ ದಲಿತರ ಬೆಂಬಲಕ್ಕೆ ನಿಂತಿದ್ದು, ಒಟ್ಟು ಪ್ರಕರಣ ಕುತೂಹಲ ಕೆರಳಿಸಿದೆ.
ಈ ಬಗ್ಗೆ ದೇವಾಲಯದ ಆಡಳಿತ ಮೋಕ್ತೇಸರರಾಗಿರುವ ಸುಧೀರ್ ಪ್ರಭು ಖಾಸಗಿ ವೆಬ್ ಸೈಟಿಗೆ ನೀಡಿದ ಹೇಳಿಕೆಯಲ್ಲಿ “ದೇವಾಲಯದ ಆಡಳಿತ ಸಮಿತಿಯ ಗಮನಕ್ಕೆ ತಾರದೆ ಶಾಸಕ ಹರೀಶ್ ಪೂಂಜಾ ಅವರ ಕೈಯ್ಯಲ್ಲಿ ಪಲ್ಲಕ್ಕಿ ಹೊರಿಸಲಾಗಿದೆ. ಆದರೆ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿರುವಂತೆ, ಆಲ್ ಟೆಂಪಲ್ ಅಸೋಷಿಯೇಷನ್ ಕಡೆಯಿಂದ ನಮಗೆ ಯಾವುದೇ ಸಂದೇಶ ಬಂದಿಲ್ಲ. ಹೀಗೊಂದು ಘಟನೆ ನಡೆದಿದೆ ಎಂದಷ್ಟೇ ಈಗ ತಿಳಿದುಬಂದಿದೆ. ಜೊತೆಗೆ ಉತ್ಸವ ಇನ್ನೂ ಮುಗಿದಿಲ್ಲ, ಎಲ್ಲವೂ ಮುಗಿದ ನಂತರ ನಡೆಯುವ ಸಭೆಯಲ್ಲಿ ಪಲ್ಲಕ್ಕಿ ಹೊರಿಸಿದ ವಿಷಯವೂ ಚರ್ಚೆಗೆ ಬರಬಹುದು. ಆದ್ದರಿಂದ ಈ ಬಗ್ಗೆ ಯಾವುದೆ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.





