ತಲೆಯಲ್ಲಿ ಬೆಲ್ಲದ ಬುಟ್ಟಿ ಹೊತ್ತು, ಕಲ್ಲು ತಕ್ಕಡಿ ಹಿಡಿದು ಊರೂರು ಅಲೆದಾಡುತ್ತಿದ್ದ ಬಾಲಕ ಸಹಸ್ರಾರು ಹಸಿದ ಹೊಟ್ಟೆಗಳನ್ನು ತಣಿಸಿದ ಕಥೆ
1978ಕ್ಕೂ ಹಿಂದಿನ ಸ್ಟೋರಿ. ಹೈಸ್ಕೂಲ್ ಕಲಿತ ಬಾಲಕ ತನ್ನ ಹುಟ್ಟೂರು ಜೋಕಟ್ಟೆಯ ತೋಕೂರು ಎಂಬಲ್ಲಿ 50 ಕೇಜಿ ಬೆಲ್ಲದ ಬುಟ್ಟಿಯನ್ನು ತಲೆಯಲ್ಲಿ ಹೊರುತ್ತಾ, ತೂಗುವ ತಕ್ಕಡಿ ಮತ್ತು ಕಲ್ಲುಗಳನ್ನು ಕೈಯ್ಯಲ್ಲಿ ಹಿಡ್ಕೊಂಡು 5 ಕಿ.ಮೀ. ಸುತ್ತಮುತ್ತ ಮನೆ ಮನೆ ಬೆಲ್ಲ ಮಾರಾಟ ಮಾಡುತ್ತಾ ಎಳೆಯದರಲ್ಲೇ ಶ್ರಮಜೀವಿಯಾಗಿ ಗುರುತಿಸಿಕೊಂಡ ವ್ಯಕ್ತಿ ಇಂದು ಸಹಸ್ರಾರು ನೌಕರರ ಕಂಪೆನಿಯನ್ನು ಮುನ್ನಡೆಸುವ ಶಕ್ತಿಯಾಗಿ ಬೆಳೆದಿದ್ದಾರೆ. ಈ ನಡುವೆ ಅವರು ನಡೆದ ಕಲ್ಲು ಮುಳ್ಳಿನ, ಏಳುಬೀಳಿನ ಹಾದಿ ರೋಚಕವಾದುದು.
ಅವರು ಬೇರಾರಲ್ಲ. ಕರಾವಳಿಯ ಅನಿವಾಸಿ ಉದ್ಯಮಿ, ಸಹಸ್ರಾರು ಜನರ ಕಣ್ಣೊರೆಸಿದ ಕಾಯಕಜೀವಿ ಝಕರಿಯಾ ಜೋಕಟ್ಟೆ ಎಂಬ ಮಹಾನ್ ವ್ಯಕ್ತಿತ್ವವೇ ಮೇಲೆ ಉಲ್ಲೇಖಿಸಿದ ನೈಜಕಥೆಯ ಕಥಾನಾಯಕ. ಇಂದು ಅವರು ಸೌದಿ ಅರೇಬಿಯಾದಲ್ಲಿ ಕಟ್ಟಿ ಬೆಳೆಸಿದ ಅಲ್ ಮುಝೈನ್ ಕಂಪೆನಿ ಸಹಸ್ರಾರು ಕುಟುಂಬಕ್ಕೆ ನೆರಳಾಗಿ ನಿಂತಿದೆ. ಮನುಷ್ಯ ಆರ್ಥಿಕವಾಗಿ ಸಂಪನ್ನನಾಗಬೇಕು. ಶ್ರೀಮಂತಿಕೆಯೂ ಬೇಕು. ಆದರೆ ಆತನಲ್ಲಿ ಹೃದಯ ಶ್ರೀಮಂತಿಕೆ ಇಲ್ಲದೇ ಇದ್ದರೆ ಪ್ರಯೋಜನವಾದರೂ ಏನು? ಝಕರಿಯಾ ಅವರು ಇದಕ್ಕೆ ವ್ಯತಿರಿಕ್ತ. ಕಷ್ಟದಿಂದ ಮೇಲೆ ಬಂದ ಝಕರಿಯಾ ಜೋಕಟ್ಟೆ ಅವರಿಗೆ ಬಡ/ಅಶಕ್ತರ ನೋವು ಏನೆಂದು ಗೊತ್ತು. ಆದ್ದರಿಂದಲೇ ಅವರ ಕಂಪೆನಿಯ ಲಾಭದ ಬಲುದೊಡ್ಡ ಪಾಲನ್ನು ಸಮಾಜಕ್ಕೆ, ಸಮುದಾಯಕ್ಕೆ ಅರ್ಪಿಸುತ್ತಿದ್ದಾರೆ. ಕೋಟ್ಯಾಂತರ ರೂ.ಗಳ ಸಮಾಜ ಸೇವೆಯನ್ನು ತಾಯ್ನಾಡ ಅಭ್ಯುದಯಕ್ಕಾಗಿ ಮೀಸಲಿಟ್ಟ ಉದಾರ ವ್ಯಕ್ತಿ ಝಕರಿಯಾ ಜೋಕಟ್ಟೆ.
ನಿಮಗೆಲ್ಲಾ ಗೊತ್ತಿರಬಹುದು. ಮಂಗಳೂರು ವೆನ್ಲಾಕ್ ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಜೊತೆಗಾರರಿಗೆ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರತಿನಿತ್ಯ ರಾತ್ರಿಯ ಭೋಜನ ವಿತರಿಸಲಾಗುತ್ತದೆ. ಕಳೆದ ಎರಡು ವರ್ಷಗಳಿಂದ ಪವಿತ್ರ ರಂಝಾನ್ ನ ಒಂದು ತಿಂಗಳು ಪೂರ್ತಿಯಾಗಿ ಫುಡ್ ನ್ನು ಪ್ರಾಯೋಜಿಸುತ್ತಿರುವವರು ಇದೇ ಝಕರಿಯಾ ಹಾಜಿ ಜೋಕಟ್ಟೆ. ಆ ಮೂಲಕ ಝಕರಿಯಾ ಅವರು ವರ್ಷದ ಒಂದು ತಿಂಗಳಲ್ಲಿ ಜಾತಿ ಮತ ಬೇಧವೆನ್ನದೇ ಸುಮಾರು ಹನ್ನೆರಡು ಸಾವಿರ ಅಶಕ್ತರ ಒಂದು ಹೊತ್ತಿನ ಹೊಟ್ಟೆಯನ್ನು ತಣಿಸುತ್ತಿದ್ದಾರೆ. ಅಂತಹ ಅಶಕ್ತರ ಪ್ರಾರ್ಥನೆಯ ಫಲ ಖಂಡಿತಾ ಝಕರಿಯಾ ಅವರಿಗಿದೆ. ಇದು ಕೇವಲ ಸ್ಯಾಂಪಲ್ ಅಷ್ಟೆ. ಬಡ/ಅಶಕ್ತರ ಪಾಲಿಗೆ ಇಂತಹ ನೂರಾರು ಸೇವಾ ಯೋಜನೆಗಳ ಒಡೆಯನಾಗಿರುವ ಝಕರಿಯಾ ಜೋಕಟ್ಟೆಯಂತಹ ಉದ್ಯಮಿಗಳು ನಮ್ಮ ಕಣ್ಣ ಮುಂದೆ ಬೆರಳಣಿಕೆಯಷ್ಟೇ ಕಾಣಸಿಗುತ್ತಾರೆ. ಬಾವಿಯ ನೀರನ್ನು ಬಾವಿಗೆ ಚೆಲ್ಲುವ ಝಕರಿಯಾಕರಂತಹ ಉದ್ಯಮಿಗಳು ಮತ್ತಷ್ಟು ಉದ್ಭವಿಸಿದಾಗ ಸಮಾಜ ಸುಧಾರಣೆ ಕಾಣಬಹುದು. ಸೃಷ್ಟಿಕರ್ತನ ಕರುಣೆ ಅವರ ಮೇಲೆ ಸದಾ ಇರಲಿ.




