ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಹಾಗೂ ಪೆನ್ ಡ್ರೈವ್ನಲ್ಲಿ ವಿಡಿಯೋಗಳಿವೆ ಎಂಬುದು ಸತ್ಯಕ್ಕೆ ದೂರವಾದ ಸುದ್ದಿ: ಡಿಸಿಪಿ ನಾರಾಯಣ್ ಸ್ಪಷ್ಟನೆ
ಬೆಂಗಳೂರು: ಆತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಇದ್ಧ ಹೈ-ಸೆಕ್ಯೂರಿಟಿ ವಿಭಾಗದ ಕೊಠಡಿಯಲ್ಲಿ ನಿಷೇಧಿತ ವಸ್ತುಗಳು ಪತ್ತೆ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸರು ತನಿಖೆ ಚುರುಕುಗೊಳಿಸಿದ್ಧಾರೆ.
ಜೈಲಿನ ಕೊಠಡಿಯಲ್ಲಿ ಪ್ರಜ್ವಲ್ ರೇವಣ್ಣ ಮೊಬೈಲ್ನಲ್ಲಿ ಮಾತನಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಅಲ್ಲದೇ, ಮೊಬೈಲ್ನಲ್ಲಿ ಕೆಲ ವಿಡಿಯೋಗಳಿದ್ದು, ವಿವಿಧ ಒಟಿಟಿ ಆ್ಯಪ್ಗಳನ್ನ ಇನ್ಸ್ಟಾಲ್ ಮಾಡಿಕೊಳ್ಳಲಾಗಿತ್ತು ಎಂದು ವರದಿಯಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಡಿಸಿಪಿ ನಾರಾಯಣ್, ಮೊಬೈಲ್ ಹಾಗೂ ಪೆನ್ ಡ್ರೈವ್ನಲ್ಲಿ ವಿಡಿಯೋಗಳಿವೆ ಎಂಬುದು ಸುದ್ದಿಯು ಸತ್ಯಕ್ಕೆ ದೂರವಾದದ್ದು. ಜೈಲಿನಲ್ಲಿ ಸಿಕ್ಕ ನಿಷೇಧಿತ ವಸ್ತುಗಳನ್ನ ಜಪ್ತಿ ಮಾಡಿ ಅವುಗಳನ್ನ ಸೀಲ್ ಮಾಡಿ ತನಿಖಾಧಿಕಾರಿಗೆ ನೀಡಲಾಗಿದೆ ಎಂದರು.
ಪ್ರಜ್ವಲ್ ರೇವಣ್ಣ ಇದ್ದ ಕೊಠಡಿಯಲ್ಲಿ ಮತ್ತೋರ್ವ ಆರೋಪಿಯೂ ಇದ್ದ. ಮೊಬೈಲ್ ಯಾರು ಉಪಯೋಗಿಸುತ್ತಿದ್ದರು ಎಂಬುದು ಇನ್ನೂ ತಿಳಿದುಬಂದಿಲ್ಲ. ಹಾಗೂ ಪೋನ್ ಪಾಸ್ ವರ್ಡ್ ಬಗ್ಗೆ ಆರೋಪಿಗಳು ತಿಳಿಸಿಲ್ಲ. ಆದಾಗ್ಯೂ ಜೈಲಿನೊಳಗೆ ಮೊಬೈಲ್ನಲ್ಲಿ ಹೇಗೆ ಬಂತು ಎಂಬುದರ ತನಿಖೆ ನಡೆಸಲಾಗುತ್ತಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಪೆನ್ ಡ್ರೈವ್ನಲ್ಲಿ ವಿಡಿಯೋಗಳಿವೆ ಅಂತ ಕೆಲ ಮಾಧ್ಯಮಗಳು ಹೇಳುತ್ತಿರುವುದು ಸತ್ಯಕ್ಕೆ ದೂರವಾದದ್ದು. ನಿಷೇಧಿತ ವಸ್ತುಗಳು ಸಿಕ್ಕಿರುವ ಬಗ್ಗೆ ಕೇಸ್ ದಾಖಲಾಗಿದ್ದು, ಅವುಗಳು ಸೀಲ್ಡ್ ಕವರ್ಗಳಲ್ಲಿವೆ. ಇದನ್ನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್ಎಸ್ಎಲ್) ಕಳುಹಿಸಲಾಗುವುದು. ತಾಂತ್ರಿಕ ಸಾಕ್ಷ್ಯಾಧಾರಗಳು ಬಂದ ಬಳಿಕ ಆರೋಪಿಗಳನ್ನು ವಿಚಾರಣೆಗೊಳಪಡಿಸಿ ಹೇಳಿಕೆ ಪಡೆಯಲಾಗುವುದು. ಬಳಿಕ ಮೊಬೈಲ್ ಪಾಸ್ ವರ್ಡ್, ಸಿಡಿಆರ್ ಎಲ್ಲವನ್ನ ಪರಿಶೀಲಿಸಲಾಗುವುದು ಎಂದು ಡಿಸಿಪಿ ತಿಳಿಸಿದ್ದಾರೆ.
ಪತ್ತೆಯಾಗಿರುವ ರೆಡ್ ಮೀ ಮೊಬೈಲ್ಗೆ ಕಾರಾಗೃಹದಲ್ಲಿ ಸಿಗ್ನಲ್ ಸಿಗಲಿದೆ ಎಂಬುದನ್ನ ಕೈದಿಗಳು ಅರಿತುಕೊಂಡಿದ್ದಾರೆ. ಜೈಲಿನಲ್ಲಿ ಜಾಮರ್ ಅಳವಡಿಸಿದ್ದರೂ 2ಜಿ ಮತ್ತು 3ಜಿ ನೆಟ್ ವರ್ಕ್ ಸಿಗುತ್ತಿವೆ. ಭದ್ರತಾ ದೃಷ್ಟಿಯಿಂದ ರೆಡ್ ಮೀ ಕಂಪನಿಗೂ ಕೂಡ ಪತ್ರ ಬರೆಯಲಾಗುವುದು ಎಂದು ಮಾಹಿತಿ ನೀಡಿದ್ದಾರೆ.




