ಮಂಗಳೂರು: ಏರ್ ಪೋರ್ಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭದ್ರತಾ ಪಡೆಯ ಶ್ವಾನ ಇನ್ನಿಲ್ಲ
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆದಿತ್ಯ ರಾವ್ ಇರಿಸಿದ್ದ ಬಾಂಬ್ ಪತ್ತೆ ಹಚ್ಚಿದ್ದ ಶ್ವಾನ ಲೀನಾ ಅನಾರೋಗ್ಯದಿಂದ ಭಾನುವಾರ ಮೃತಪಟ್ಟಿದೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಶ್ವಾನ ದಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶ್ವಾನ ಲೀನಾ ಕಿಡ್ನಿ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿತ್ತು.
ಫೆ. 16 ರಿಂದ ಆಹಾರ ಸೇವಿಸುತ್ತಿರಲಿಲ್ಲ, ಗ್ಲುಕೋಸ್ ನೀಡಲಾಗುತ್ತಿತ್ತು. ಭಾನುವಾರ ಬೆಳಗ್ಗೆ ಮೃತಪಟ್ಟಿದ್ದು, ಲೀನಾ ಅಂತ್ಯ ಸಂಸ್ಕಾರವನ್ನು ಭಾನುವಾರ ಸಕಲ ಸೇನಾ ಗೌರವದೊಂದಿಗೆ ವಿಮಾನ ನಿಲ್ದಾಣದ ಆವರಣದಲ್ಲಿ ನಡೆಸಲಾಗಿದೆ.
2013 ರ ಮೇ. 5 ರಂದು ಜನಿಸಿದ್ದ ಲೀನಾ ರಾಂಚಿಯಲ್ಲಿ ಸ್ಪೋಟಕ ಪತ್ತೆ ಕಾರ್ಯಾಚರಣೆಯಲ್ಲಿ ತರಬೇತಿ ಪಡೆದಿತ್ತು. 2020 ರ ಜನವರಿ 12 ರಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಆರೋಪಿ ಆದಿತ್ಯರಾವ್ ಇರಿಸಿದ್ದ ಬಾಂಬ್ ಪತ್ತೆ ಮಾಡಿತ್ತು.
ಮಂಗಳೂರಿನ ಸಿಐಎಸ್‌ಎಫ್ ಕಚೇರಿ ಆವರಣದಲ್ಲಿ ಡಿಟೆಕ್ಟಿವ್ ಲೀನಾಗೆ ಅಧಿಕಾರಿಗಳಿಂದ ಅಂತಿಮ ನಮನ ಸಲ್ಲಿಸಲಾಗಿದ್ದು ಸಿಐಎಸ್‌ಎಫ್ ಸಕಲ ಗೌರವದೊಂದಿಗೆ ಮಂಗಳೂರು ಹಳೆ ಏರ್ಪೋರ್ಟ್ ಆವರಣದಲ್ಲಿ ಲೀನಾ ಅಂತ್ಯಕ್ರಿಯೆ ನೆರವೇರಿದೆ.





