ಬಿರಿಯಾನಿ ಊಟದ ವ್ಯವಸ್ಥೆ ಮಾಡಲಾಗಿದೆ ಎಂದ ಸಚಿವ ಎಸ್.ಟಿ.ಸೋಮಶೇಖರ್ ವಿರುದ್ಧ ದೂರು ದಾಖಲು
ಬೆಂಗಳೂರು, ಎ.13: ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರ ವಿರುದ್ಧ ಇಲ್ಲಿನ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಭಾಷಣ ಮಾಡುತ್ತಾ ‘ಬಿರಿಯಾನಿ ಊಟದ ವ್ಯವಸ್ಥೆ ಮಾಡಲಾಗಿದೆ’ ಎಂದು ಹೇಳುವ ಮೂಲಕ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆಂದು ಜೆಡಿಎಸ್ ರಾಜ್ಯ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್ ಅವರು ಚುನಾವಣಾಧಿಕಾರಿ ಅವರಿಗೆ ದೂರು ನೀಡಿ ವಿಡಿಯೋ ತುಣುಕೊಂದನ್ನು ಸಹ ಲಗತಿಸಿದ್ದರು.
ಚುನಾವಣಾಧಿಕಾರಿಗಳು ಸಚಿವರ ಭಾಷಣದ ವಿಡಿಯೋ ತುಣುಕನ್ನು ಪರಿಶೀಲಿಸಿದಾಗ ನೀತಿ ಸಂಹಿತೆ ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ.
ಕಗ್ಗಲಿಪುರ ಠಾಣೆ ಪೊಲೀಸರು ಸಚಿವ ಎಸ್.ಟಿ.ಸೋಮಶೇಖರ್ ವಿರುದ್ಧ ದೂರು ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.




