August 11, 2026

ಮಂಗಳೂರಿನ ಈ ಪ್ರದೇಶದಲ್ಲಿ ಹಾರಾಡಲಿದೆ ಅತ್ಯಂತ ಎತ್ತರದ ರಾಷ್ಟ್ರಧ್ವಜ

0
IMG-20260811-WA0039

ಮಂಗಳೂರು: ಮಂಗಳೂರಿನ ಐತಿಹಾಸಿಕ ಬಾವುಟಗುಡ್ಡೆಯ ಟಾಗೋರ್ ಪಾರ್ಕ್‌ನಲ್ಲಿ ಭವ್ಯವಾದ 78 ಮೀಟರ್ ಎತ್ತರದ ನೂತನ ಧ್ವಜಸ್ತಂಭ ತಲೆಎತ್ತಿದೆ. ಮುಂಬರುವ ಆಗಸ್ಟ್‌ 15ರ ಸ್ವಾತಂತ್ರ್ಯ ದಿನಾಚರಣೆಯಂದು ಈ ಬೃಹತ್ ಧ್ವಜಸ್ತಂಭದಲ್ಲಿ ರಾಷ್ಟ್ರಧ್ವಜವನ್ನು ಅಧಿಕೃತವಾಗಿ ಹಾರಿಸಲು ಸಿದ್ಧತೆ ನಡೆಸಲಾಗಿದೆ.

ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಸುಮಾರು ರೂ. 75 ಲಕ್ಷ ವೆಚ್ಚದಲ್ಲಿ ಧ್ವಜಸ್ತಂಭ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯ ಅನುದಾನವನ್ನು ಪಾಲಿಕೆಯಲ್ಲಿ ಠೇವಣಿಯಿಟ್ಟು, ಅದೇ ಮೊತ್ತದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಕಾಮಗಾರಿ ಪೂರ್ಣಗೊಳಿಸಲಾಗಿದೆ.

ರಾಯಪುರದಿಂದ ತರಿಸಲಾದ ಬೃಹತ್ ಲೋಹದ ಕಂಬದ ವಿವಿಧ ಭಾಗಗಳನ್ನು ದೈತ್ಯ ಕ್ರೇನ್‌ಗಳ ನೆರವಿನಿಂದ ಒಂದಕ್ಕೊಂದು ಜೋಡಿಸಿ ಧ್ವಜಸ್ತಂಭವನ್ನು ನಿರ್ಮಿಸಲಾಗಿದೆ. ಈ ಧ್ವಜಸ್ತಂಭವು ಜಿಐ ಲೋಹದಿಂದ ನಿರ್ಮಾಣಗೊಂಡಿದ್ದು, ಇದರ ಒಟ್ಟು ತೂಕ ಸುಮಾರು 14 ಟನ್‌ ಎನ್ನಲಾಗಿದೆ. ಧ್ವಜಸ್ತಂಭ ಅಳವಡಿಸುವ ಜವಾಬ್ದಾರಿಯನ್ನು ‘ಸನ್‌ಲೈಟ್ ಲ್ಯುಮಿನರೀಸ್’ ಸಂಸ್ಥೆ ನಿರ್ವಹಿಸಿದೆ.

ಧ್ವಜಾರೋಹಣಕ್ಕಾಗಿ ಮೋಟರೀಕೃತ ವ್ಯವಸ್ಥೆ ಅಳವಡಿಸಲಾಗಿದ್ದು, ತ್ರೀ-ಫೇಸ್ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗಿದೆ. ಧ್ವಜಸ್ತಂಭದ ಮೇಲ್ಭಾಗದಲ್ಲಿ ಮಿಂಚುಬಂಧಕ ವ್ಯವಸ್ಥೆಯನ್ನೂ ಅಳವಡಿಸಲಾಗಿದೆ. ಇದಲ್ಲದೆ, ವಿಮಾನಗಳಿಗೆ ಧ್ವಜಸ್ತಂಭ ಗೋಚರಿಸುವಂತೆ ಎರಡೂ ಬದಿಗಳಲ್ಲಿ ಕೆಂಪು ಬಣ್ಣದ ಮಾರ್ಗಸೂಚಿ ದೀಪಗಳನ್ನು ಅಳವಡಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!