ಪುತ್ತೂರು: ಕಾಂಗ್ರೆಸ್ ಟಿಕೆಟ್ ಗೊಂದಲ: ಬೆಂಗಳೂರಿಗೆ ತೆರಳಿ ಡಿಕೆಶಿ ಭೇಟಿಯಾದ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಸಹಿತ 13 ಮಂದಿ ಟಿಕೆಟ್ ಆಕಾಂಕ್ಷಿಗಳು: ಆಕಾಂಕ್ಷಿಗಳಿಗೆ ಡಿಕೆಶಿ ಹೇಳಿದ್ದೇನು!
ಪುತ್ತೂರು : ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಮಹಿಳಾ ಅಭ್ಯರ್ಥಿಗೆ ಸ್ಥಾನ ನೀಡಿದ ಹಿನ್ನೆಲೆ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಸಹಿತ 13 ಮಂದಿ ಟಿಕೆಟ್ ಆಕಾಂಕ್ಷಿಗಳು ನಿಯೋಗದೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ರನ್ನು ಭೇಟಿ ಮಾಡಿ ಮಹಿಳಾ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ಬೇಡಿಕೆಯನ್ನಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಪುತ್ತೂರು ವಿಧಾನ ಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಾರ್ಟಿಯು ಮಹಿಳಾ ಸ್ಪರ್ಧಿಯನ್ನು ಕಣಕ್ಕಿಳಿಸಿದ್ದು, ಈ ಹಿನ್ನೆಲೆ ಕಾಂಗ್ರೆಸ್ ನಲ್ಲಿಯೂ ಮಹಿಳಾ ಸ್ಪರ್ಧಿಗೆ ಅವಕಾಶ ನೀಡಬೇಕು.., ನಮ್ಮ ಪಕ್ಷದಲ್ಲಿಯೇ ಹಲವು ವರ್ಷಗಳಿಂದ ಪಕ್ಷ ಸಂಘಟನೆಗಾಗಿ ದುಡಿದವರಿಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿ 14 ಟಿಕೆಟ್ ಆಕಾಂಕ್ಷಿತರಲ್ಲಿ 13 ಮಂದಿ ಬೆಂಗಳೂರಿಗೆ ತೆರಳಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ರನ್ನು ಭೇಟಿ ಮಾಡಿ ತಮ್ಮ ಬೇಡಿಕೆಯನ್ನು ಮುಂದಿಟ್ಟಿದ್ದಾರೆ ಎನ್ನಲಾಗುತ್ತಿದೆ.
ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ರವರ ನೇತೃತ್ವದಲ್ಲಿ ಕಾಂಗ್ರೆಸ್ ಪ್ರಮುಖರು, ಮುಖಂಡರು, ಕೆಲ ಕಾರ್ಯಕರ್ತರು ಬೆಂಗಳೂರಿಗೆ ತೆರಳಿದ್ದಾರೆ.
ಮನವಿಯನ್ನು ಆಲಿಸಿದ ಡಿಕೆಶಿ ಈ ಬಗ್ಗೆ ಚರ್ಚಿಸಿ ಸೂಚಿಸುವುದಾಗಿ ತಿಳಿಸಿದ್ದಾರೆನ್ನಲಾಗಿದೆ. ಅಷ್ಟೇ ಅಲ್ಲದೇ ಎಲ್ಲರು ಒಟ್ಟಾಗಿ ಪಕ್ಷಕ್ಕಾಗಿ ಕೆಲಸ ಮಾಡಿ ಎಂದು ಸೂಚಿಸಿರುವುದಾಗಿ ತಿಳಿದು ಬಂದಿದೆ.
ಪುತ್ತೂರು ವಿಧಾನಸಭಾ ಕ್ಷೇತ್ರದ ಪ್ರಮುಖರು ಹಾಗೂ ಕಾರ್ಯಕರ್ತರ ಜೊತೆ ಕ್ಷೇತ್ರದ ರಾಜಕೀಯ ವಿದ್ಯಾಮಾನಗಳ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಚರ್ಚಿಸಿದ್ದಾಗಿ ಡಿಕೆ ಶಿವಕುಮಾರ್ ರವರು ತಮ್ಮ ಫೇಸ್ಬುಕ್ ಫೇಜ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.




