September 20, 2024

ಬಂಟ್ವಾಳ: ಕೆಎಸ್ಆರ್ ಟಿಸಿ ಬಸ್ ಬೈಕ್ ಗೆ ಡಿಕ್ಕಿ: ಸವಾರ ಮೃತ್ಯು

0

ಬಂಟ್ವಾಳ: ಕೆಎಸ್.ಆರ್.ಟಿ.ಸಿ.ಬಸ್ ಬೈಕ್ ಗೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಬಂಟ್ವಾಳ ಸಮೀಪದ ಜಕ್ರಿಬೆಟ್ಟು ಎಂಬಲ್ಲಿ ನಡೆದಿದೆ.

ಸರಪಾಡಿ ನಿವಾಸಿ ಅವಿವಾಹಿತ ಯುವಕ ಸೇಸಪ್ಪ ಯಾನೆ ಶ್ರೇಯಸ್ (30) ಮೃತಪಟ್ಟ ವ್ಯಕ್ತಿ. ಖಾಸಗಿ ಕಂಪೆನಿಯೊಂದರಲ್ಲಿ ಚಾಲಕ ವೃತ್ತಿ ಮಾಡುತ್ತಿದ್ದ ಬಡಕುಟುಂಬದ ಯುವಕನಾಗಿದ್ದು, ಸಂಜೆ ವೇಳೆ ವೃತ್ತಿ ಮುಗಿಸಿ ಮನೆಗೆ ವಾಪಾಸು ಬೈಕಿನಲ್ಲಿ ಹೋಗುವ ವೇಳೆ ಅಪಘಾತ ಸಂಭವಿಸಿದೆ.

ಬಿ.ಸಿ ರೋಡು ಕಡೆಯಿಂದ ಧರ್ಮಸ್ಥಳ ಹೆದ್ದಾರಿಯಲ್ಲಿ ಶ್ರೇಯಸ್ ಸರಪಾಡಿ ಮನೆಗೆ ಬೈಕಿನಲ್ಲಿ ಹೋಗುತ್ತಿದ್ದ ವೇಳೆ ಧರ್ಮಸ್ಥಳ ಕಡೆಯಿಂದ ವೇಗವಾಗಿ ಬರುತ್ತಿದ್ದ ಸರಕಾರಿ ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡು ಎದುರಿನಿಂದ ಬೈಕಿಗೆ ಡಿಕ್ಕಿಯಾಗಿದೆ.

ಡಿಕ್ಕಿಯ ರಭಸಕ್ಕೆ ಬೈಕ್ ಸಂಪೂರ್ಣ ಜಖಂಗೊಂಡಿದ್ದು, ಯುವಕ ಗಂಭೀರವಾಗಿ ಗಾಯಗೊಂಡಿದ್ದ. ಅಪಘಾತಕ್ಕೆ ಒಳಗಾದ ಸ್ಥಳದಲ್ಲಿ ರಕ್ತದೋಕುಳಿ ಹರಿದಿತ್ತು. ಕೂಡಲೇ ಈತನನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕೊಂಡು ಹೋಗಿದ್ದರು, ಆದರೆ ಗಂಭೀರವಾಗಿ ಗಾಯಗೊಂಡಿದ್ದ ಈತನನ್ನು 108 ಅಂಬ್ಯುಲೆನ್ಸ್ ವಾಹನದಲ್ಲಿ ಮಂಗಳೂರಿಗೆ ಸಾಗಿಸಲಾಯಿತು. ಆದರೂ ದಾರಿ ಮಧ್ಯೆ ಈತ ಕೊನೆಯುಸಿರೆಳೆದಿದ್ದಾನೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಘಟನಾ ಸ್ಥಳಕ್ಕೆ ಟ್ರಾಫಿಕ್ ಎಸ್.ಐ.ಮೂರ್ತಿ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಪಘಾತದ ಸ್ಪಾಟ್ ಆಗುತ್ತಿದೆ ಧರ್ಮಸ್ಥಳ-ಕಡೂರು ಹೆದ್ದಾರಿ:
ಬಿ.ಸಿ ರೋಡು -ಧರ್ಮಸ್ಥಳ ರಾಜ್ಯ ಹೆದ್ದಾರಿಯ ಕಾಮಗಾರಿ ಮುಗಿದ ಅಗಲೀಕರಣಗೊಂಡ ಬಳಿಕ ಈ ಭಾಗದಲ್ಲಿ ಅನೇಕ ಅಪಘಾತಗಳು ಸಂಭವಿಸಿದ್ದಲ್ಲದೆ ಸಾವುನೋವುಗಳು ಸಂಭವಿಸಿದವು. ಇತ್ತೀಚಿನ ದಿನಗಳಲ್ಲಿ ಇದೊಂದು ‌ಅಪಘಾತವಲಯವಾಗಿ‌ ಮಾರ್ಪಾಡುಗೊಂಡಿರುವ ಬಗ್ಗೆ ವಾಹನ ಸವಾರರಿಗೆ ನಡುಕ ಉಂಟಾಗಿದೆ.

ಈ ಕಾರಣಕ್ಕಾಗಿ ತಿರುವು ಹಾಗೂ ಅಗತ್ಯ ವಿರುವ ಕಡೆಗಳಲ್ಲಿ ಅಪಘಾತ ತಪ್ಪಿಸಲು ರಸ್ತೆಯಲ್ಲಿ ಸ್ಪೀಡ್ ಕಂಟ್ರೋಲ್ ಗಳನ್ನು ಹಾಕುವಂತೆ ಮತ್ತು ಸೂಚನ ಫಲಕಗಳನ್ನು ಹಾಕುವಂತೆ ಇತ್ತೀಚಿಗೆ ಅಧಿಕಾರಿಗಳ ಜೊತೆ ಸ್ಥಳಕ್ಕೆ ಬೇಟಿ ನೀಡಿದ ಶಾಸಕರು ಸೂಚನೆ ನೀಡಿದ್ದರು. ಆದರೆ ಇಲಾಖೆಯವರು ಎಲ್ಲಾ ಸೂಚನಾ ಕ್ರಮಗಳನ್ನು ಅಳವಡಿಸಲಾಗಿದೆಯಾದರೂ ಅಪಘಾತ ಸಂಭವಿಸುವುದು ಮಾತ್ರ ಕಡಿಮೆಯಾಗಿಲ್ಲ ಎಂಬ ಕೂಗು ಕೇಳಿ ಬರುತ್ತಿದೆ.

Leave a Reply

Your email address will not be published. Required fields are marked *

error: Content is protected !!