ರೈತರ ಪ್ರತಿಭಟನೆ, ಭಾರತೀಯರಿಗೆ ಸಂದ ದೊಡ್ಡ ಗೆಲುವು ಕತಾರ್ ಇಂಡಿಯನ್ ಸೋಷಿಯಲ್ ಫೋರಂ
ದೋಹ: ಕೃಷಿ ಕಾನೂನನ್ನು ಹಿಂತೆಗೆದುಕೊಳ್ಳುವ ಭಾರತ ಸರ್ಕಾರದ ನಿರ್ಧಾರವು, ವರ್ಷಪೂರ್ತಿ ನಡೆದ ರೈತರ ದಿಟ್ಟ ಪ್ರತಿಭಟನೆಗೆ ಸಂದ ಜಯವಾಗಿದೆ.
ರೈತರ ಪರಿಶ್ರಮ, ಸರ್ಕಾರದ ಆಮಿಷ ಮತ್ತು ಎಲ್ಲಾ ವಿಧವಾದ ಓಲೈಕೆಗಳ ವಿರುದ್ಧ ದೃಢವಾದ ನಿಲುವಿನ ನಡುವೆ ನಡೆದ ಉತ್ತಮವಾದ ಶಾಂತಿಯುತ ಪ್ರತಿಭಟನೆ, ಪ್ರಜಾಪ್ರಭುತ್ವದಲ್ಲಿ ಹುದುಗಿರುವ ಜನರ ಶಕ್ತಿಯನ್ನು ಸರ್ಕಾರಕ್ಕೆ ಅರ್ಥಮಾಡಿಸುವಲ್ಲಿ ಯಶಸ್ವಿಯಾಗಿದೆ.
ಭಾರತದಲ್ಲಿ ನಡೆದ ವಿವಿಧ ಹೋರಾಟಗಳ ಇತಿಹಾಸದಲ್ಲಿ, ಭಾರತದ ರೈತರು ನಡೆಸಿದ ಈ ಐತಿಹಾಸಿಕ ಚಳುವಳಿ, ಇತಿಹಾಸದ ಪುಟಗಳಲ್ಲಿ ಒಂದು ಹೊಸ ಅಧ್ಯಾಯವನ್ನು ಸೃಷ್ಟಿಸಿದೆ.
ಈ ಚಳುವಳಿಯಲ್ಲಿ ಭಾಗವಹಿಸಿದ ಎಲ್ಲಾ ರೈತಾಪಿ ವರ್ಗಕ್ಕೂ, ತಮ್ಮ ಹಕ್ಕುಗಳನ್ನು ಪಡೆಯಲು ಹೋರಾಟ ಮಾಡುತ್ತಾ, ಮಡಿದ ಹುತಾತ್ಮರಿಗೂ ಹಾಗೂ ರೈತರ ಪ್ರತಿಭಟನೆಯನ್ನು ಬೆಂಬಲಿಸಿದ ಸಂಘಟನೆಗಳಿಗೂ ಕತಾರ್ ಇಂಡಿಯನ್ ಸೋಶಿಯಲ್ ಫೋರಮ್ ಹೃತ್ಪೂರ್ವಕ ನಮನಗಳನ್ನು ಸಲ್ಲಿಸುತ್ತದೆ.
ಯಾವುದಕ್ಕೂ ಸಾಟಿಯಿಲ್ಲದ ದೃಢತೆ ಮತ್ತು ಅಚಲ ಮನೋಭಾವದಿಂದ ಹೋರಾಡಿ ಪಡೆದ ಈ ಸ್ಫೂರ್ತಿದಾಯಕ ವಿಜಯಕ್ಕಾಗಿ, ಕತಾರ್ ಇಂಡಿಯನ್ ಸೋಶಿಯಲ್ ಫೋರಮ್ ರೈತ ಚಳುವಳಿಯನ್ನು ಅಭಿನಂದಿಸುತ್ತದೆ. ಈ ಪ್ರತಿಭಟನೆಯನ್ನು ಭಾರತೀಯ ಇತಿಹಾಸದಲ್ಲಿ ಮರೆಯಲು ಅಥವಾ ಕ್ಷಮಿಸಲು ಸಾಧ್ಯವಿಲ್ಲ.
ಈ ಕೃಷಿ ಕಾನೂನುಗಳಿಂದ, ರೈತರ ಜೀವನದ ಮೇಲೆ ಬೀರಿರುವ ಪ್ರಭಾವದ ಬಗ್ಗೆ ತಡವಾಗಿ ಅರಿತುಕೊಂಡು, ಅದನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ ಸರ್ಕಾರವು, ಕೃಷಿ ಕಾನೂನನ್ನು ಹಿಂತೆಗೆದುಕೊಳ್ಳುವುದರ ಜೊತೆಗೆ, ರೈತರು ಎದುರಿಸುತ್ತಿರುವ ಜೀವಹಾನಿ, ಆದಾಯ ಮತ್ತು ಇತರ ಆರ್ಥಿಕ ವಿಪತ್ತುಗಳಿಗೆ ಸರಿಯಾದ ಪರಿಹಾರವನ್ನು ಕೊಡಬೇಕು.
ತಮ್ಮ ತಪ್ಪನ್ನು ಬಹಿರಂಗವಾಗಿ ವ್ಯಕ್ತಪಡಿಸಲು ಮತ್ತು ಭಾರತದ ರೈತರು ಹಾಗೂ ಹೆಚ್ಚಿನ ಸಾರ್ವಜನಿಕರಿಂದ ಕ್ಷಮೆಯನ್ನು ಕೇಳಲು ಸರ್ಕಾರ ಮತ್ತು ಪ್ರಧಾನ ಮಂತ್ರಿಯ ಮೇಲಿನ ಜನರ ನಿರೀಕ್ಷೆಯನ್ನು ಕತಾರ್ ಇಂಡಿಯನ್ ಸೋಶಿಯಲ್ ಫೋರಮ್ ನೈತಿಕವಾಗಿ ಬೆಂಬಲಿಸುತ್ತದೆ.
ಸಿಎಎ, ಎನ್‌ಆರ್‌ಸಿ, ಯುಎಪಿಎ ಯಂತಹ ಕಠಿಣ ಜನವಿರೋಧಿ ಕಾನೂನನ್ನು ಎದುರಿಸುತ್ತಿರುವ ಭಾರತೀಯ ಸಮಾಜದ ಇತರ ವರ್ಗಗಳಿಗೆ ಈ ಐತಿಹಾಸಿಕ ಗೆಲುವು ಭರವಸೆಯನ್ನು ನೀಡುತ್ತದೆ ಎಂದು ಕತಾರ್ ಇಂಡಿಯನ್ ಸೋಶಿಯಲ್ ಫೋರಮ್ ಬಲವಾಗಿ ನಂಬುತ್ತದೆ.