ಪುತ್ತೂರು: ಮಹಿಳೆಯೊಂದಿಗೆ ಫೋಟೊ ವೈರಲ್ ವಿಚಾರ: ಶಾಸಕರ ಪಿ.ಎ ಯಿಂದ ಸೈಬರ್ ಕ್ರೈಮ್ ಪೊಲೀಸರಿಗೆ ದೂರು
ಪುತ್ತೂರು: ಶಾಸಕ ಸಂಜೀವ ಮಠಂದೂರು ಅವರು ಮಹಿಳೆಯೊಬ್ಬರ ಜೊತೆಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಈ ಕುರಿತು ಶಾಸಕರ ಆಪ್ತ ಸಹಾಯಕ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾರೆ.
ಬೆಂಗಳೂರಿನ ಗಾಂಧಿನಗರದಲ್ಲಿರುವ ಅಲಸೂರು ಗೇಟ್ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಶಾಸಕರ ಆಪ್ತ ಸಹಾಯಕ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಶಾಸಕ ಸಂಜೀವ ಮಠಂದೂರು ಅವರನ್ನು ಹೋಲುವ ಫೋಟೋಗಳನ್ನು ಮಹಿಳೆಯ ಫೋಟೋದೊಂದಿಗೆ ಜೋಡಣೆ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ. ಈ ಬಗ್ಗೆ ತಕ್ಷಣ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಶಾಸಕರ ಆಪ್ತ ಸಹಾಯಕ ವಸಂತ್ ಎಸ್. ದೂರಿದ್ದಾರೆ.
ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಸಂಜೀವ ಮಠಂದೂರು ಅವರ ಫೋಟೋವನ್ನು ಮಹಿಳೆಯೊಬ್ಬರ ಫೋಟೋದೊಂದಿಗೆ ಎಡಿಟ್ ಮಾಡಿ, ಫೇಸ್ ಬುಕ್, ವಾಟ್ಸ್ ಆ್ಯಪ್ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗಿದೆ. ಶಾಸಕರ ಮಾನಹಾನಿ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೈಬರ್ ವಿಭಾಗದ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.





