February 3, 2026

ಕೇರಳದಲ್ಲಿ 5 ವರ್ಷದ ಹಿಂದೆ ನಡೆದಿದ್ದ ಬುಡಕಟ್ಟು ಯುವಕನ ಕೊಲೆ ಪ್ರಕರಣ: 14 ಮಂದಿ ದೋಷಿ ಎಂದ ಕೋರ್ಟ್

0
IMG-20230404-WA0020.jpg

ಪಾಲಕ್ಕಾಡ್‌: 5 ವರ್ಷಗಳ ಹಿಂದೆ ಕೇರಳದಲ್ಲಿ ನಡೆದಿದ್ದ ಬುಡಕಟ್ಟು ಯುವಕನೊಬ್ಬನ ಕೊಲೆಗೆ ಸಂಬಂಧಿಸಿದಂತೆ 14 ಮಂದಿ ಆರೋಪಿಗಳನ್ನು ದೋಷಿಗಳೆಂದು ಪರಿಗಣಿಸಿ ಕೇರಳದ ಪಾಲಕ್ಕಾಡ್‌ನ ಮನ್ನಾರ್‌ಕಾಡ್‌ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.

ಮಧು ಎಂಬ ಬುಡಕಟ್ಟು ಯುವಕನನ್ನು ಫೆ. 22, 2018 ರಂದು ಕೊಲೆಗೈದ ಕಾರಣಕ್ಕೆ ಒಟ್ಟು 16 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಮಂಗಳವಾರ ಇಬ್ಬರನ್ನು ಖುಲಾಸೆಗೊಳಿಸಿರುವ ನ್ಯಾಯಾಲಯ 14 ಮಂದಿಯನ್ನು ದೋಷಿಗಳೆಂದು ಹೇಳಿದೆ.

ಪ್ರಾವಿಷನ್‌ ಸ್ಟೋರ್‌ವೊಂದರಿಂದ ದಿನಸಿ ಸಾಮಗ್ರಿಗಳು ನಾಪತ್ತೆಯಾಗಿದ್ದ ಪ್ರಕರಣದಲ್ಲಿ ಮಧು ಎಂಬ ಬುಡಕಟ್ಟು ಯುವಕನನ್ನು ಥಳಿಸಿ ಕೊಲೆಗೈಯ್ಯಲಾಗಿದ್ದು, ಏಳನೇ ತರಗತಿಯ ಬಳಿಕ ಶಾಲೆಯನ್ನು ತೊರೆದಿದ್ದ ಮಧು ಆ ಬಳಿಕ ಬಡಗಿ ಕೆಲಸಕ್ಕೆ ಇಳಿದಿದ್ದ. ಅಲೆಮಾರಿಯಂತೆಯೇ ಜೀವನ ಸಾಗಿಸುತ್ತಿದ್ದ ಮಧು, ಗುಡ್ಡಗಾಡುಗಳಲ್ಲೇ ಜೀವನ ನಡೆಸುತ್ತಿದ್ದ. ತೀರಾ ಅಪರೂಪ ಎನ್ನುವಂತೆ ಮನೆಗೆ ಬರುತ್ತಿದ್ದ.

ಇನ್ನು ಘಟನಾ ಸಮಯದಲ್ಲಿ ಮಧು ಕಾಡಂಚಿನಲ್ಲಿರುವ ಗುಹೆಯೊಂದರಲ್ಲಿ ಆಶ್ರಯ ಪಡೆಯುತ್ತಿದ್ದು, ವ್ಯಕ್ತಿಯೊಬ್ಬರು ಕಟ್ಟಿಗೆ ತರಲೆಂದು ಕಾಡಿಗೆ ಹೋಗಿದ್ದಾಗ ಮಧುವನ್ನು ಕಂಡಿದ್ದು ಆತನ ಜೊತೆಗೆ ದಿನಸಿಗಳು ಇವೆಯೆಂದು ಊರಿನಲ್ಲಿರುವ ಅಂಗಡಿಯಲ್ಲಿ ತಿಳಿಸಿದ್ದರು.

ಇದನ್ನು ತಿಳಿದು ಊರಿನ ಜನ ಅಂಗಡಿ ಮಾಲಿಕರ ಜೊತೆ ಕಾಡಿಗೆ ಬಂದಿದ್ದು ಸುಮಾರು 200 ರೂ. ಮೌಲ್ಯದ ದಿನಸಿ ಸಾಮಗ್ರಿಗಳನ್ನು ಮಧು ಇದ್ದ ಸ್ಥಳದಿಂದ ಸುಮಾರು 4 ಕಿ.ಮೀ ದೂರ ಅವನ ತಲೆಯಲ್ಲೇ ಹೊರಿಸಿಕೊಂಡು ಬರುತ್ತಾರೆ. ದಾರಿ ಮಧ್ಯದಲ್ಲೇ ಆತನ್ನು ಅವಾಚ್ಯ ಪದಗಳಿಂದ ನಿಂದಿಸುತ್ತಾ, ಅಮಾನವೀಯವಾಗಿ ಥಳಿಸುತ್ತಾ ಕರೆತಂದಿದ್ದು, ಇದರ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಪೋಲಿಸರು ದಾರಿಯಲ್ಲೇ ಅವರನ್ನು ತಡೆಯುತ್ತಾರೆ. ಅದಾಗಲೇ ವಿಪರೀತವಾಗಿ ಗಾಯಗೊಂಡಿದ್ದ ಮಧು ಪೋಲಿಸರ ಮುಂದೆಯೇ ಬಿದ್ದು ಸಾವನ್ನಪ್ಪುತ್ತಾನೆ.

ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 14 ಮಂದಿ ಆರೋಪಿಗಳನ್ನು ದೋಷಿಗಳೆಂದು ಪ್ರಕಟಿಸಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!