ಟರ್ಕಿಯಲ್ಲಿ ಭೂಕಂಪ: 52 ದಿನಗಳ ಬಳಿಕ ಹೆತ್ತಮ್ಮನ ಮಡಿಲು ಸೇರಿದ ಪುಟ್ಟ ಕಂದಮ್ಮ!

ಇಸ್ತಾಂಬುಲ್ : ಸಾವಿರಾರು ಜನರ ಸಾವುನೋವಿಗೆ ಕಾರಣವಾಗಿದ್ದ ಟರ್ಕಿ ಮಹಾಭೂಕಂಪದಲ್ಲಿ ಪವಾಡ ಸದೃಶವಾಗಿ ಬದುಕುಳಿದಿದ್ದ ಪುಟಾಣಿ ಕಂದಮ್ಮ ಇದೀಗ ತನ್ನ ಹೆತ್ತಮ್ಮನ ಮಡಿಲು ಸೇರಿದೆ.
ಫೆಬ್ರವರಿ 13ರಂದು ಈ ಮಗುವಿನ ಫೋಟೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ಮಗು ಬದುಕಿದ್ದು ಪವಾಡವೇ ಸರಿ ಎಂದು ಜನರು ಅಭಿಪ್ರಾಯಪಟ್ಟಿದ್ದರು. ಇದೀಗ ಆ ಮಗುವಿನ ಅಮ್ಮನೂ ಜೀವಂತವಾಗಿರುವ ಸುದ್ದಿ ಬಂದಿದೆ.
ಇನ್ನು ಟರ್ಕಿಯಲ್ಲಿ ಭಾರೀ ಭೂಕಂಪ ಸಂಭವಿಸಿದ ಬಳಿಕ ಅವಶೇಷಗಳಡಿಯಿಂದ 128 ಗಂಟೆಗಳ ನಂತರ ರಕ್ಷಿಸಲ್ಪಟ್ಟ “ಪವಾಡಸದೃಶ್ಯ ಕಂದಮ್ಮಸಾಮಾಜಿಕ ಮಾಧ್ಯಮಗಳಲ್ಲಿ ಲಕ್ಷಾಂತರ ಹೃದಯಗಳನ್ನು ಗೆದ್ದಿತ್ತು. ಈ ಪುಟ್ಟ ಮಗುವಿನ ಫೋಟೊ ವೈರಲ್ ಆಗಿತ್ತು. ಆದರೆ, ಭೂಕಂಪದಲ್ಲಿ ಪುಟ್ಟ ಕಂದಮ್ಮನ ತಾಯಿ ಮೃತಪಟ್ಟಿದ್ದಾರೆ ಎನ್ನಲಾಗಿತ್ತು.
ಆದರೆ ಇದೀಗ ಬಂದ ವರದಿ ಪ್ರಕಾರ ಆ ಅಮ್ಮ ಜೀವಂತವಾಗಿದ್ದಾರೆ. ಭೂಕಂಪ ಸಂಭವಿಸಿದ 52 ದಿನಗಳ ಬಳಿಕ ಬದುಕಿ ಬಂದಿದ್ದಾರೆ. ಈಕೆ ಬದುಕಿ ಬಂದಿರುವ ಕುರಿತು ಸಚಿವ ಆಂಟನ್ ಗೆರಾಶ್ಚೆಂಕೊ ಸ್ಪಷ್ಟಪಡಿಸಿದ್ದಾರೆ.