ಬಂಟ್ವಾಳ: ಶಂಕಿತ ರೇಬಿಸ್‌ಗೆ ಯುವಕ ಬಲಿ
ಬಂಟ್ವಾಳ: ಶಂಕಿತ ರೇಬಿಸ್‌ಗೆ ಯುವಕನೋರ್ವ ಬಲಿಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ಪುಂಜಾಲಕಟ್ಟೆಯಲ್ಲಿ ನಡೆದಿದೆ.
ಅಶೋಕ ಹೆಗ್ಡೆ ಎಂಬವರ ಪುತ್ರ ಪ್ರಶಾಂತ ಹೆಗ್ಡೆ(31) ಮೃತ ಯುವಕ.
ಮೂರು ತಿಂಗಳ ಹಿಂದೆ ಪ್ರಶಾಂತ್ ಅವರಿಗೆ ಅವರ ಮನೆಯ ಸಾಕು ನಾಯಿ ಕಚ್ಚಿದ್ದು, ಬಳಿಕ ನಾಯಿ ಮೃತ ಪಟ್ಟಿತ್ತು. ಆದರೆ ಪ್ರಶಾಂತ್ ಅವರು ನಾಯಿ ಕಚ್ಚಿರುವುದಕ್ಕೆ ಸೂಕ್ತ ಚಿಕಿತ್ಸೆ ಪಡೆದಿರಲಿಲ್ಲ ಎನ್ನಲಾಗಿದೆ. ಬಳಿಕ ತೀವ್ರ ಸಂಕಟ, ಜ್ವರದಿಂದ ಒದ್ದಾಡಿದ್ದು, ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ತೆರಳಿದ್ದಾರೆ.
ಇನ್ನು ಜ್ವರ ತಪಾಸಣೆ ನಡೆಸಿದ ಸಂದರ್ಭ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಸರಕಾರಿ ಆಸ್ಪತ್ರೆಗೆ ಕಳುಹಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರಶಾಂತ್ ಮೃತಪಟ್ಟಿದ್ದಾರೆ.
ಪ್ರಶಾಂತ್ ಅವರ ಕ್ಲಿನಿಕಲ್ ಪರೀಕ್ಷೆ ವರದಿಗಳು ರೇಬಿಸ್ ಲಕ್ಷಣ ಹೊಂದಿದ್ದವು. ಆದರೆ ಅವರು ಯಾವ ಕಾರಣದಿಂದ ಮೃತರಾಗಿದ್ದಾರೆಂದು ನಿಖರವಾಗಿ ತಿಳಿದು ಬಂದಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ಅವರು ತಿಳಿಸಿದ್ದಾರೆ.




