ಬಾಂಬ್ ಸ್ಫೋಟಕ್ಕೆ ಸಂಚು ಆರೋಪ: 7 ವರ್ಷಗಳ ಬಳಿಕ ಅಬ್ದುಲ್ ವಾಹಿದ್ ನನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿ ಬಿಡುಗಡೆ
ಭಟ್ಕಳ (ಉತ್ತರ ಕನ್ನಡ) : ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ್ದ ಆರೋಪದಲ್ಲಿ ಬಂಧಿತನಾಗಿದ್ದ ಭಟ್ಕಳದ ಅಬ್ದುಲ್ ವಾಹಿದ್ ಸಿದ್ದಿಬಾಪಾ ಎಂಬವರನ್ನು ದಿಲ್ಲಿಯ ಪಟಿಯಾಲ ಹೌಸ್ ಕೋರ್ಟ್ ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿ ಬಿಡುಗಡೆಗೆ ಆದೇಶ ಹೊರಡಿಸಿದೆ.
ನಿಷೇಧಿತ ಇಂಡಿಯನ್ ಮುಜಾಹಿದೀನ್ ಸಂಘಟನೆಯ ಸದಸ್ಯ ಹಾಗೂ 2007 ರಲ್ಲಿ ದೇಶದಲ್ಲಿ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ್ದ ಎಂದು ಆರೋಪಿಸಿ ಭಯೋತ್ಪಾದಕ ಚಟುವಟಿಕೆ ಆರೋಪದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಸಿದ್ದಿಬಾಪಾ ಅವರನ್ನು ಏಳು ವರ್ಷಗಳ ಹಿಂದೆ ಅಂದರೆ 2016ರಲ್ಲಿ ಬಂಧಿಸಿತ್ತು.
ಇದೀಗ ಈ ಪ್ರಕರಣ ಕುರಿತು ವಿಚಾರಣೆ ನಡೆಸಿದ ಬಳಿಕ ನ್ಯಾಯಾಲಯ ಭಟ್ಕಳದ ಅಬ್ದುಲ್ ವಾಹಿದ್ ಸಿದ್ದಿಬಾಪಾ ಅವರನ್ನು ಆರೋಪ ಮುಕ್ತಗೊಳಿಸಿ ಬಿಡುಗಡೆಗೊಳಿಸಿದೆ.
ಈ ಬಗ್ಗೆ ವಿಚಾರಣಾಧೀನ ಕೈದಿಗಳಿಗೆ ಕಾನೂನು ನೆರವು ನೀಡುವ ಸಂಘಟನೆಯಾದ ಜಮೀಯತ್ ಉಲಮಾ ಹಿಂದ್ನ ಕಾನೂನು ನೆರವು ಸಮಿತಿಯ ಮುಖ್ಯಸ್ಥ ಗುಲ್ಝಾರ್ ಅಝ್ಮಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.




