RSSನವರು ‘ಕೌರವರು’ ಹೇಳಿಕೆ: ರಾಹುಲ್ ಗಾಂಧಿ ವಿರುದ್ಧ ಮತ್ತೊಂದು ಮಾನನಷ್ಟ ಪ್ರಕರಣ ದಾಖಲು

ಹರಿದ್ವಾರ: ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯ ಸಮಸ್ಯೆಗಳು ನಿಲ್ಲುವ ಸೂಚನೆಗಳು ಕಾಣುತ್ತಿಲ್ಲ. ಕಾಂಗ್ರೆಸ್ ನಾಯಕ ಒಂದಿಲ್ಲೊಂದು ಪ್ರಕರಣದಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ.
ಸುದ್ದಿ ಸಂಸ್ಥೆಯೊಂದರ ಪ್ರಕಾರ, ಈ ಬಾರಿ ಹರಿದ್ವಾರದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಭಾರತ್ ಜೋಡೋ ಯಾತ್ರೆಯ ವೇಳೆ ಆರ್‌ಎಸ್‌ಎಸ್ ಸಂಘಟನೆಯು 21ನೇ ಶತಮಾನದ ಕೌರವ ಎಂದು ಹೇಳಿಕೆ ನೀಡಿದ್ದಕ್ಕಾಗಿ ರಾಹುಲ್ ಗಾಂಧಿ ವಿರುದ್ಧ ಆರ್‌ಎಸ್‌ಎಸ್ ನ ಕಾರ್ಯಕರ್ತರೊಬ್ಬರು ಹರಿದ್ವಾರದ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ವಾಸ್ತವವಾಗಿ, ಜನವರಿಯಲ್ಲಿ ಭಾರತ್ ಜೋಡೋ ಯಾತ್ರೆ ಹರಿಯಾಣವನ್ನು ತಲುಪಿದಾಗ, ರಾಹುಲ್ ಗಾಂಧಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು(ಆರ್‌ಎಸ್‌ಎಸ್) ’21ನೇ ಶತಮಾನದ ಕೌರವರು’ ಎಂದು ಬಣ್ಣಿಸಿದರು. ಇಂದಿನ ಕೌರವರು ಖಾಕಿ ಹಾಫ್ ಪ್ಯಾಂಟ್ ಧರಿಸುತ್ತಾರೆ. ಕೈಯಲ್ಲಿ ಕೋಲು ಹಿಡಿದುಕೊಳ್ಳುತ್ತಾರೆ ಎಂದು ರಾಹುಲ್ ಗಾಂಧಿ ಹೇಳಿದ್ದರು.